ಹುಬ್ಬಳ್ಳಿ: ಏಕಸ್ ಕಂಪನಿ ಅವಳಿ ನಗರ ಹುಬ್ಬಳ್ಳಿ, ಧಾರವಾಡದಲ್ಲಿ 5 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಏಕಸ್ ಕಂಪನಿ 3,524 ಕೋಟಿ ಬಂಡವಾಳ ಹೂಡಿಕೆ ಮುಂದೆ ಬಂದಿದೆ. ರಾಜ್ಯ ಸರ್ಕಾರದಿಂದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮಗಟ್ಟಿ ಕೈಗಾರಿಕಾ ವಸಹಾತುಗಳಲ್ಲಿ ಕಂಪನಿಗೆ ಮಂಜೂರು ಮಾಡಲಾಗಿದೆ. ಮುಖ್ಯವಾಗಿ ದಿನನಿತ್ಯ ಉಪಯೋಗಿ ಗ್ರಾಹಕ ವಸ್ತುಗಳ ತಯಾರಿಕಾ ಘಟಕವನ್ನು ಕಂಪನಿ ಸ್ಥಾಪನೆ ಮಾಡುವುದು. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ 20 ಸಾವಿರ ಉದ್ಯೋಗ ಅವಕಾಶಗಳು ಲಭಿಸಲಿವೆ. ಪೊಟ್ಟಣ ತಯಾರಿಕಾ ಉದ್ದಿಮೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಯುಫ್ಲೇಕ್ಸ್ ಕಂಪನಿ 1,464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡ ಮಮ್ಮಿಗಟ್ಟಿ ಬಳಿಗೆ 50 ಎಕರೆ ಜಮೀನು ಕಂಪನಿಗೆ ಮಂಜೂರು ಮಾಡಲಾಗಿದೆ. ಕಂಪನಿಯಿಂದ ನೇರವಾಗಿ ಒಂದು ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ಎಫ್.ಎಂ.ಸಿ.ಜಿ (ಫಾಸ್ಟ್ ಮೂವಿಂಗ್ ಕಂಜ್ಯೂಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ. ಎಫ್.ಎಂ.ಸಿ.ಜಿ ಕ್ಲಸ್ಟರ್ ಸ್ಥಾಪನೆಯಾದರೆ, ಹುಬ್ಬಳ್ಳಿ ದಕ್ಷಿಣ ಭಾರತದ ಹಬ್ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಇದು ಕಾರಣೀಭೂತವಾಗಲಿದೆ. ಪ್ರತಿ ಹಂತದಲ್ಲಿ 2,500 ಕೋಟಿಯಂತೆ 3 ಹಂತಗಳಲ್ಲಿ 7,500 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕ್ಲಸ್ಟರ್ ಸ್ಥಾಪನೆ ಬೇಕಾದ ಸೌಲಭ್ಯಗಳನ್ನು ಒದಗಿಸು ಕೈಗಾರಿಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಭಾರತದ ಗೊಹವಾಟಿಯಲ್ಲಿ ಸದ್ಯ ಎಫ್.ಎಂ.ಸಿ.ಜಿ ಕ್ಲಸ್ಟರ್ ಇದ್ದು, ಕೇಂದ್ರ ಸರ್ಕಾರದ ಪ್ರೋತ್ಸಾಹದಿಂದ ಉದ್ದಿಮೆ ಬಲವಾಗಿ ಬೆಳದು ನಿಂತಿದೆ. ಅಲ್ಲಿನ ಉದ್ಯಮಿಗಳ ಮನ ಒಲಿಸಿ ಹುಬ್ಬಳ್ಳಿ ಕರೆ ತರಲು ಉದ್ದಮಿ ಉಲ್ಲಾಸ್ ಕಾಮತ್ ರ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.
ನೂತನ ಕೈಗಾರಿಕಾ ನೀತಿಯಲ್ಲಿ ಎರಡನೇ ಹಾಗೂ ಮೂರನೆ ಸ್ತರದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕೊಪ್ಪಳದಲ್ಲಿ ಬಾಣಾವರ ಗ್ರಾಮದಲ್ಲಿ 400 ಎಕರೆ ಜಮೀನು ಖರೀದಿಸಿ ಎಸ್.ಇ.ಝಡ್ ಘೋಷಣೆ ಮಾಡಲಾಗಿದೆ. ಆಟಿಕೆ ತಯಾರಿಕಾ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಏಕಸ್ ಕಂಪನಿ 5000 ಕೋಟಿ ಬಂಡವಾಳ ಹೂಡಿಕೆ ಮಾಡಿ ಆಟಿಕೆ ತಯಾರಿಕೆ ಘಟಕ ಸ್ಥಾಪಿಸಲಿದೆ. ಇದರಿಂದ 20 ಸಾವಿರ ಉದ್ಯೋಗ ಸ್ಥಳೀಯ ಜನರಿಗೆ ಲಭಿಸಲಿದೆ. ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 4000 ಎಕರೆ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿಗಳು ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ರಾಜ್ಯ ಮಟ್ಟದ ಸಮಿತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕೂಡ 55 ಔಷಧ ಕಂಪನಿಗಳ ಸೇರಿದಂತೆ ಒಟ್ಟು 70 ಕಂಪನಿಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. 2289 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 11,000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ದಿ ಪರ್ವ ಶುರುವಾಗಿದೆ ಎಂದರು.
ಕೈಗಾರಿಕೆ ಸ್ಥಾಪನೆಗಳಿಗೆ ರಾಜ್ಯ ಸರ್ಕಾರದಿಂದ ಹಲವು ರಿಯಾತಿಗಳನ್ನು ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಏಕಸ್ ಹಾಗೂ ಯುಪ್ಲೇಕ್ಸ್ ಕಂಪನಿಗಳಿಗೆ ಅಭಿವೃದ್ಧಿಪಡಿಸದ ಭೂಮಿಯನ್ನು ನೀಡಲಿದ್ದೇವೆ. ಹಾಗಾಗಿ ದರ ಹಾಗೂ ಪಾವತಿಯಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ. ಕಟ್ಟಡ, ಕ್ಲಸ್ಟರ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಮೂಲ ಬಂಡವಾಳದ ಹೂಡಿಕೆಯಲ್ಲಿ ಶೇ.25 ರಷ್ಟು ವಿನಾಯಿತಿ ನೀಡಲಾಗಿದೆ. ಹೊಸದಾಗಿ ಸ್ಥಾಪನೆಯಾದ ಕಂಪನಿಗಳ ವಾರ್ಷಿಕ ವಹಿವಾಟಿನ ಮೇಲೆ ಶೇ.2 ರಷ್ಟು ಉತ್ತೇಜಕ ದರವನ್ನು ನೀಡಲಾಗುವುದು. ರಾಜ್ಯ ಸರ್ಕಾರದಿಂದ ಕೈಗಾರಿಕೆ ಸ್ಥಾಪನೆ ಮಾಡುವ ಕಂಪನಿಗಳಿಗೆ ಕಡ್ಡಾಯವಾಗಿ ಸ್ಥಳೀಯರು ಹಾಗೂ ರಾಜ್ಯದವರಿಗೆ ಶೇ.100 ರಷ್ಟು ಉದ್ಯೋಗ ಅವಕಾಶಗಳನ್ನು ನೀಡುವಂತೆ ನಿಯಮಗಳನ್ನು ವಿಧಿಸಲಾಗಿದೆ ಎಂದು ಹೇಳಿದರು.
PublicNext
14/01/2021 07:47 pm