ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರೈತರು ಹೋರಾಟದ ಕಿಚ್ಚು ಈಗ ಬೆಂಗಳೂರಿನಲ್ಲೂ ಆರಂಭವಾಗಲಿದೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೂ ಕರೆಕೊಟ್ಟಿದೆ. ಬೆಂಗಳೂರಲ್ಲಿ ಬುಧವಾರ ರೈತರು ಸಿಡಿದೇಳಲಿದ್ದಾರೆ. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಅನ್ನದಾತರು ಬರಲಿದ್ದಾರೆ. ರಾಜಧಾನಿಗೆ ನಾಳೆಯೇ ಸಾವಿರಾರು ರೈತರು ಬರಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಡಿಸೆಂಬರ್ 9 ರಂದು ಬೆಳಗ್ಗೆ ರೈಲು ಮೂಲಕ ಸಾವಿರಾರು ಮಂದಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ ಕೊಡಲಿದ್ದಾರೆ. ಅಲ್ಲಿಂದ 11 ಗಂಟೆಗೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನೆ ನಡೆಯಲಿದೆ. ಬಳಿಕ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.
ಬಂದ್ ದಿನ ಏನಿರುತ್ತೆ?: ಹೋಟೆಲ್, ಬಸ್, ಆಟೋ, ಒಲಾ ಉಬರ್ ಕ್ಯಾಬ್, ದಿನಸಿ ಅಂಗಡಿಗಳು ಹಾಗೂ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಏನಿರಲ್ಲ?: ರಾಜ್ಯ ಹೆದ್ದಾರಿಗಳು ಬಂದ್ ಸಾಧ್ಯತೆ, ಕೆಲವಡೆ ವಾಹನ ತಡೆಯುವ ಪ್ರಯತ್ನಗಳು ಆಗಬಹುದು, ಮೆಜೆಸ್ಟಿಕ್ ರೈಲ್ವೇ ನಿಲ್ದಾಣ, ಫ್ರೀಡಂ ಪಾರ್ಕ್ ಮಾರ್ಗವಾಗಿ ವಿಧಾನಸೌಧಕ್ಕೆ ಮುತ್ತಿಗೆ ಯೋಜನೆ ರೈತರದ್ದು ಹೀಗಾಗಿ ಈ ಭಾಗದಲ್ಲಿ ವಾಹನ ಸಂಚಾರ ವ್ಯತ್ಯಯ. ಜಿಲ್ಲಾದ್ಯಾಂತ ರೈತರ ಪ್ರತಿಭಟನೆಯಿರೋದ್ರಿಂದ ಮಾರ್ಕೆಟ್ ಗಳಲ್ಲಿ ಸೊಪ್ಪು ತರಕಾರಿಗಳ ಪೂರೈಕೆಯಲ್ಲಿ ಕೊರತೆ ಎದುರಾಗುವ ಸಾಧ್ಯತೆ ಇದೆ.
PublicNext
07/12/2020 09:09 am