ಬೆಂಗಳೂರು(ಡಿ. 01): ಶಾಸಕ ಸಿ ಪಿ ಯೋಗೇಶ್ವರ್ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಬಣದೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಅವರು ಬಿ.ಎಲ್. ಸಂತೋಷ್ ಹಾಗೂ ರಮೇಶ್ ಜಾರಕಿಹೊಳಿ ನೆರವು ಯಾಚಿಸಿದರೇ ವಿನಃ ಯಡಿಯೂರಪ್ಪ ಅವರನ್ನು ನಂಬಿ ಕೂರಲಿಲ್ಲ. ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಕೊಡುವ ಬಗ್ಗೆ ಇದಕ್ಕು ಮುನ್ನ ಎಲ್ಲಿಯೂ ಯಡಿಯೂರಪ್ಪ ಮಾತಾಡಿರಲಿಲ್ಲ. ಆದ್ರೆ ಇವತ್ತು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಸಿಪಿವೈ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ನೂರಕ್ಕೆ ನೂರರಷ್ಟು ಸಿಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲ ಬಿಜೆಪಿಗರಲ್ಲೇ ಕೆಲವರು ಯಡಿಯೂರಪ್ಪ ವಿರುದ್ಧ ಸಂಚು ರೂಪಿಸುತ್ತಿರುವ ಸುದ್ದಿಯೂ ಇದೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರಿಗೆ ಸೆಡ್ಡು ಹೊಡೆಯಲು ಯೋಗೇಶ್ವರ್ ಅವರನ್ನ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಯೋಜಿಸಿರಬಹುದು ಎಂದು ಹೇಳಲಾಗುತ್ತಿದೆ.
PublicNext
01/12/2020 12:10 pm