0ದಾವಣಗೆರೆ: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದರಲ್ಲಿಯೂ ಹೊನ್ನಾಳಿ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಆದ್ರೆ, ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಗ್ರಾಮದಲ್ಲಿ ಕುರಿಗಳ ಅಸಹಜ ಸಾವು ಕುರಿ ಸಾಕಾಣಿಕೆದಾರರು ಹಾಗೂ ರೈತರಲ್ಲಿ ಭಯ ಹುಟ್ಟಿಸಿದೆ. ಇದುವರೆಗೆ ಒಟ್ಟು 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ ಎಂದು ಅಂದಾಜಿಸಲಾಗಿದೆ. ಕಳೆದ 15 ದಿನಗಳಿಂದ ಭರ್ಮಪ್ಪ ಎಂಬುವವರಿಗೆ ಸೇರಿದ 30 ಕುರಿಗಳು ಸಾವನ್ನಪ್ಪಿದ್ದು, ಯಾಕೆ ಈ ರೀತಿಯಾಗುತ್ತಿದೆ ಎಂಬುದು ಗೊತ್ತಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.ಪಿ ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು. ನಿತ್ಯವೂ ಎರಡರಿಂದ ಮೂರು ಕುರಿಗಳು ಸಾಯುತ್ತಿವೆ. ಕಂಪೆನಿಯೊಂದರ ಔಷಧಿಯನ್ನು ಕುರಿಗಳಿಗೆ ನೀಡಲಾಗಿದ್ದು, ಇದರಿಂದ ಇವುಗಳ ಆರೋಗ್ಯದಲ್ಲಿ ಏರುಪೇರಾಗಿದೆಯೋ ಇಲ್ಲವೋ ಬೇರೆಯದ್ದೋ ಕಾರಣವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಪಶು ವೈದ್ಯರು ಚೀಟಿ ಬರೆದುಕೊಟ್ಟಿದ್ದರು. ಅದರಂತೆ ಔಷಧಿ ಕೊಟ್ಟಿದ್ದೇವೆ. ವೈದ್ಯ ರಂಗನಾಥ್ ಎಂಬುವವರು ಹೊರಗಡೆ ಚೀಟಿ ಬರೆದು ಕೊಡುತ್ತಾರೆ. ಸರಿಯಾಗಿ ಕೆಲಸ ಮಾಡಲ್ಲ. ಕಚೇರಿಗೆ ಹೋದರೆ ಇರುವುದಿಲ್ಲ ಎಂದು ಸ್ಥಳೀಯರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಈ ಬಗ್ಗೆ ಮಾತನಾಡುತ್ತೇನೆ. ವೈದ್ಯರು ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಭಯಭೀತರಾಗಬೇಡಿ. ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.
PublicNext
06/07/2022 08:24 pm