ಚಾಮರಾಜನಗರ: ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಯುವಕನೋರ್ವನಿಗೆ ಪಟ್ಟಣದ ಪೊಲೀಸರು ತುಟಿ ಒಡೆದು ರಕ್ತ ಬರುವಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಗ್ರಾಮದ ಮಲ್ಲೇಶ್ ಹಲ್ಲೆಗೊಳಗಾದ ಯುವಕ. ಮಲ್ಲೇಶ್ ಎಡಿಬಿ ಸರ್ಕಲ್ ಬಳಿ ಹೆಲ್ಮೆಟ್ ರಹಿತ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಹಿಡಿದು ದಂಡ ಕಟ್ಟಲು ತಿಳಿಸಿದ್ದಾರೆ. ಈ ಮಧ್ಯೆ ಪೊಲೀಸ್ ಸಿಬ್ಬಂದಿ ಹಾಗೂ ಮಲ್ಲೇಶ್ ನಡುವೆ ಮಾತಿಗೆ ಮಾತು ಬೆಳೆದಿದ್ದರಿಂದ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವಕ ವಿಡಿಯೋ ಹರಿಬಿಟ್ಟಿದ್ದು ವೈರಲ್ ಆಗಿದೆ.
ಪೊಲೀಸ ವರ್ತನೆ ಬಗ್ಗೆ ಅಸಮಾಧಾನ ಹೊರ ಹಾಕಿದ ಸಾರ್ವಜನಿಕರು ಮಲ್ಲೇಶ್‌ನನ್ನು ಠಾಣೆಗೆ ಕರೆತಂದು ಸಬ್ ಇನ್‍ಸ್ಪೆಕ್ಟರ್ ತಾಜುವುದ್ದೀನ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮುಡಿಗುಂಡ ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
PublicNext
21/10/2020 07:14 pm