ಮಡಿಕೇರಿ: ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದು, ಸವಾರರು ಬೈಕ್ ಬಿಟ್ಟು ಪರಾರಿಯಾದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದ ಬೆಳೆಗಾರ ಅಲ್ಲೇಟಿರ ವಿಜು ಮಾಚಯ್ಯ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಬೈಕ್‌ನಲ್ಲಿ ಶ್ರೀಮಂಗಲದಿಂದ ಕಾರ್ಮಿಕನೊಬ್ಬನನ್ನು ತೋಟದ ಕೆಲಸಕ್ಕೆಂದು ಕುರ್ಚಿ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀಮಂಗಲ-ಕುರ್ಚಿ ಮುಖ್ಯ ರಸ್ತೆಯಿಂದ ತಮ್ಮ ತೋಟಕ್ಕೆ ಹೋಗುವ ರಸ್ತೆಯಲ್ಲಿ ತೋಟದಿಂದ ದಿಢೀರಾಗಿ ಕಾಡಾನೆ ಎದುರಾಗಿದೆ.
ಕಾಡಾನೆ ತಮ್ಮತ್ತಲೇ ಬರುತ್ತಿರುವುದನ್ನು ಗಮನಿಸಿದ ಬೈಕ್ ಸವಾರರು ವಾಹನವನ್ನು ಅಲ್ಲೇ ಬಿಟ್ಟು ಸುಮಾರು 100 ಅಡಿಗಳಷ್ಟು ದೂರ ಓಡಿದ್ದಾರೆ. ಅಟ್ಟಿಸಿಕೊಂಡು ಬಂದ ಕಾಡಾನೆ ಬೈಕ್‌ನ ಮೇಲೆ ಎರಗಿದ್ದು, ಬೈಕನ್ನು ಜಖಂಗೊಳಿಸಿದೆ. ಸ್ಥಳಕ್ಕೆ ಶ್ರೀಮಂಗಲ ಆರ್.ಎಫ್.ಒ. ವೀರೇಂದ್ರ ಮರಿಬಸಣ್ಣವರ್ ಮತ್ತು ಸಿಬ್ಬಂದಿ ತೆರಳಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
PublicNext
10/11/2020 08:33 pm