ಬೆಂಗಳೂರು: ರೇಷನ್, ಕಿರಾಣಿ ಅಂಗಡಿಗಳ ಮುಂದೆ ಕ್ಯೂ ಇರುವುದನ್ನು ನಾವು ನೋಡಿದ್ದೇವೆ. ಆದ್ರೆ ಬಿರಿಯಾನಿಗಾಗಿ ಒಂದೂವರೆ ಕಿ.ಮೀ ಕ್ಯೂ ಇರುವುದನ್ನು ನೋಡಿದ್ದೀರಾ? ಇಂತಹ ದೃಶ್ಯವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ಕಂಡು ಬಂದಿದೆ.
ಹೊಸಕೋಟೆ ಪ್ರಸಿದ್ಧ ಆನಂದ್ ದಮ್ ಬಿರಿಯಾನಿ ಹೋಟೆಲ್ ಮುಂದೆ ನೂರಾರು ಜನರು ಇಂದು 1.5 ಕಿ.ಮೀ ಕ್ಯೂ ನಿಂತಿದ್ದರು. ಬೆಂಗಳೂರು ನಗರ ಕೇಂದ್ರದಿಂದ ಸುಮಾರು 25 ಕಿ.ಮೀ ಸುತ್ತಮುತ್ತಲಿನ ಜನರು ಆನಂದ್ ದಮ್ ಬಿರಿಯಾನಿ ಖರೀದಿಗೆ ಬರುತ್ತಾರೆ. ಗ್ರಾಹಕರು ಬೆಳಿಗ್ಗೆ 4.30ರಿಂದಲೇ ಹೋಟೆಲ್ ಮುಂದೆ ಕ್ಯೂ ನಿಲ್ಲುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಹಕರೊಬ್ಬರು, "ನಾನು ಬೆಳಿಗ್ಗೆ 4 ಗಂಟೆಗೆ ಇಲ್ಲಿಗೆ ಬಂದಿದ್ದೇನೆ. ಆದರೆ ಬಿರಿಯಾನಿಗೆ ಸುಮಾರು 1.5 ಕಿ.ಮೀ ಉದ್ದದ ಕ್ಯೂ ಇದ್ದಿದ್ದರಿಂದ ಬೆಳಿಗ್ಗೆ 6:30ಕ್ಕೆ ನನಗೆ ಪಾರ್ಸೆಲ್ ಸಿಕ್ಕಿತು. ಇಲ್ಲಿನ ಬಿರಿಯಾನಿ ತುಂಬಾ ರುಚಿಕರವಾಗಿದೆ. ಹೀಗಾಗಿ ಎಷ್ಟೇ ಹೊತ್ತಾದರೂ ಸರಿ ಕ್ಯೂನಲ್ಲಿ ನಿಂತು ಖರೀದಿಸುತ್ತೇವೆ" ಎಂದು ಹೇಳಿದ್ದಾರೆ.
ಹೋಟೆಲ್ ಸಿಬ್ಬಂದಿ ಮಾತನಾಡಿ "ಪ್ರತಿ ಭಾನುವಾರ ನೂರಾರು ಜನರು ಬಿರಿಯಾನಿ ಖರೀದಿಸಲು ಬರುತ್ತಾರೆ. ಹೀಗಾಗಿ 1.5 ಕಿ.ಮೀ.ಗಿಂತಲೂ ಉದ್ದದ ಕ್ಯೂ ಇರುತ್ತದೆ. ಆದರೆ ಎಲ್ಲರಿಗೂ ಬಿರಿಯಾನಿ ನೀಡಲು ಕಷ್ಟ. ಈ ಹಿನ್ನೆಲೆಯಲ್ಲಿ ಮೊದಲು ಗ್ರಾಹಕರು ಕೇಳಿದಷ್ಟು ಬಿರಿಯಾನಿ ಕೊಡುತ್ತೇವೆ. ಕೊನೆಗೆ ಒಬ್ಬರಿಗೆ ಒಂದು ಪ್ಲೇಟ್‌ನಂತೆ ಕೊಡಲಾಗುವುದು. ಇದರಿಂದಾಗಿ ಕ್ಯೂನಲ್ಲಿ ನಿಂತ ಗ್ರಾಹಕರನ್ನು ನಿರಾಸೆಗೊಳಿಸುವುದನ್ನು ತಡೆಯಬಹುದಾಗಿದೆ" ಎಂದು ತಿಳಿಸಿದ್ದಾರೆ.
PublicNext
11/10/2020 11:15 am