ಆನೇಕಲ್ : ಕಾಡಾನೆ ಹಿಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿದ್ದು, ಕರ್ನಾಟಕ ಗಡಿಭಾಗ ಆನೇಕಲ್ ತಾಲೂಕಿನ ವಣಕನಹಳ್ಳಿ ಬಳಿಯ ಕೆರೆಯಲ್ಲಿ ಕಾಣಿಸಿಕೊಂಡಿವೆ.
ಕಾಡಾನೆಗಳು ತಮಿಳುನಾಡು ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದು, ಆಹಾರ ಹುಡುಕಿಕೊಂಡು ನಾಡಿಗೆ ಬಂದ ಆರು ಆನೆಗಳ ಗುಂಪು ವಣಕನಹಳ್ಳಿ, ಕಾಳನಾಯಕನಹಳ್ಳಿ, ಸಿಂಗಸಂದ್ರ ಸಹಿತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿಕೊಂಡಿವೆ.
ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಕಾಡಾನೆ ಗುಂಪು ಕೆರೆಯ ಬಳಿಯಿರುವುದನ್ನು ಗ್ರಾಮಸ್ಥರು ಕಂಡಿದ್ದಾರೆ. ಕೆಲ ಗಂಟೆಗಳ ಕಾಲ ಗ್ರಾಮದ ಹೊಲ, ಗದ್ದೆಗಳಲ್ಲಿ ಓಡಾಡಿಕೊಂಡಿದ್ದ ಕಾಡಾನೆಗಳು ಗ್ರಾಮಸ್ಥರ ಗುಂಪನ್ನು ಕಂಡು ನೀಲಗಿರಿ ತೋಪು ಸೇರಿಕೊಂಡಿತ್ತು.
ಆನೆಗಳು ಗ್ರಾಮಕ್ಕಾಗಮಿಸಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ ಗ್ರಾಮಸ್ಥರು, ಗ್ರಾಮಕ್ಕೆ ದೌಡಾಯಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆ ಗುಂಪನ್ನು ಕಾಡಿಗೆ ಅಟ್ಟಲು ಹರಸಾಹಸ ಪಡಬೇಕಾಯಿತು.
ಗ್ರಾಮಸ್ಥರು ಕಾಡಾನೆಗಳನ್ನು ನೋಡಲು ಗುಂಪು ಗುಂಪಾಗಿ ಬಂದು ಶಬ್ದ ಮಾಡುತ್ತಾ ಕಿರಿಚಾಡಿ, ಮೊಬೈಲ್ ನಲ್ಲಿ ಚಿತ್ರೀಕರಿಸಲು ಮುಂದಾದಾಗ ಕಾಡಾನೆಗಳು ಮತ್ತಷ್ಟು ಗಾಬರಿಯಿಂದ ನೀಲಗಿರಿ ತೋಪಿನಿಂದ ಹೊರಬರಲಿಲ್ಲ.
ಕೆಲ ಸಮಯದ ಬಳಿಕ ಗ್ರಾಮಸ್ಥರನ್ನು ಚದುರಿಸಿ, ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು.
PublicNext
02/12/2021 10:50 am