ಬೆಂಗಳೂರು : ಅರಣ್ಯದಂಚಿನ ಗ್ರಾಮಗಳಲ್ಲಿ ಜೀವ ಮತ್ತು ಬೆಳೆ ಹಾನಿ ಉಂಟು ಮಾಡುತ್ತಿರುವ ಕಾಡಾನೆ ಮತ್ತು ಕಾಡೆಮ್ಮೆ ಹಾವಳಿ ತಡೆಗೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿ ಹಾಗೇ ತಮಿಳುನಾಡಿನಲ್ಲಿ ಅಳವಡಿಸಿರುವ ಉಕ್ಕಿನ ಹಗ್ಗದ ತಡೆಗಳಿಗೆ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಡಾನೆ ಹಾವಳಿಗೆ ಸದ್ಯದ ಸಾಬೀತಾದ ಪರಿಹಾರ ರೈಲ್ವೆ ಬ್ಯಾರಿಕೇಡ್ ಅಳವಡಿಕೆಯಾಗಿದ್ದು, ಪ್ರತಿ ಕಿ.ಮೀ. ಬ್ಯಾರಿಕೇಡ್ ಅಳವಡಿಕೆಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗುತ್ತಿದೆ. ಮಿಗಿಲಾಗಿ ರೈಲ್ವೆ ಹಳಿಗಳೂ ಸಿಗುವುದಿಲ್ಲ.
ತಮಿಳುನಾಡಿನಲ್ಲಿ ಅಳವಡಿಸಿರುವ ಉಕ್ಕಿನ ಹಗ್ಗದ ತಡೆಗಳಿಗೆ (ಸ್ಟೀಲ್ ರೋಪ್) ಪ್ರತಿ ಕಿ.ಮೀ.ಗೆ 45 ಲಕ್ಷ ರೂ. ವೆಚ್ಚವಾಗುತ್ತದೆ ಎನ್ನಲಾಗದ್ದು, ಈ ಬಗ್ಗೆ ಪರಿಶೀಲಿಸಿ 10 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಮುನ್ನ ಮತ್ತು ಅಳವಡಿಕೆ ನಂತರದ ಜೀವಹಾನಿ ಮತ್ತು ಬೆಳೆಹಾನಿ ಕುರಿತಂತೆ ತುಲನಾತ್ಮಕ ವರದಿ ಸಲ್ಲಿಸುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
PublicNext
05/12/2024 02:36 pm