ಚಿತ್ರದುರ್ಗ : ನಿರಂತರವಾಗಿ ಸುರಿದ ಮಳೆಯಿಂದಾಗಿ ಶೀತ ಹೆಚ್ಚಾಗಿ, ಕಳೆದ ಹತ್ತು ದಿನಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಕುರಿ-ಮೇಕೆಗಳು ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಮಂಗಳವಾರ ಸಹ ಹತ್ತಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಮೃತ ಪಟ್ಟ ಕುರಿಗಳನ್ನು ರಸ್ತೆಯಲ್ಲಿ ಮಲಗಿಸಿ ಶಾಸಕಿ ಕೆ ಪೂರ್ಣಿಮಾ ಹಾಗೂ ಜಿಲ್ಲಾ ಪಶುವೈದ್ಯಾಧಿಕಾರಿ ಗ್ರಾಮಕ್ಕೆ ಬರುವಂತೆ ಕುರಿಗಾಹಿಗಳು ಪ್ರತಿಭಟನೆ ನಡೆಸಿದರು.
ಕುರಿ ಮೇಕೆಗಳಲ್ಲಿ ಕಾಲು ಸೆಳೆತ ರೋಗ ಕಾಣಿಸಿಕೊಂಡಿದ್ದು, ಜೀವನಕ್ಕೆ ಆಧಾರವಾಗಿರುವ ಕುರಿಗಳ ಸಾವನ್ನಪ್ಪಿರುವುದರಿಂದ ಕುರಿಗಾಹಿಗಳು ಕಂಗಾಲಾಗಿದ್ದಾರೆ.
ಇನ್ನು ಪಶು ಇಲಾಖೆಯವರು ಕುರಿಗಳಿಗೆ ಸರಿಯಾದ ಮಾತ್ರೆ, ಔಷಧಿ ಕೊಡುತ್ತಿಲ್ಲ, ನಮ್ಮ ಗ್ರಾಮದಲ್ಲಿ ಯಾಕೆ ಇಷ್ಟೊಂದು ಕುರಿಗಳು ಸಾವನ್ನಪ್ಪುತ್ತಿವೆ. ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಬರಲೇ ಬೇಕು ಎಂದು ಆಗ್ರಹಿಸಿದರು.
ಶಾಸಕಿ ಕೆ ಪೂರ್ಣಿಮಾ ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸದಿದ್ದರೇ ಶಾಸಕರ ಕಚೇರಿ ಮುಂದೆ ಸತ್ತ ಕುರಿಗಳೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಕುರಿಗಾಹಿಗಳು ಎಚ್ಚರಿಕೆ ನೀಡಿದರು.
PublicNext
30/11/2021 04:05 pm