ಚಿತ್ರದುರ್ಗ : ಜಿಲ್ಲೆಯ ಏಕೈಕ ಜಲಾಶಯ ಹಾಗೂ ರಾಜ್ಯದ ಅತ್ಯಂತ ಹಳೆಯ ಜಲಾಶಯಗಳಲ್ಲಿ ಒಂದಾಗಿರುವ 112 ವರ್ಷ ಇತಿಹಾಸವಿರುವ ಹಿರಿಯೂರಿನ ವಿವಿ ಸಾಗರ ಜಲಾಶಯದ ನೀರಿನ ಮಟ್ಟ ದಶಕದ ನಂತರ ಗುರುವಾರ 110 ಅಡಿ ತಲುಪಿದೆ. ಕಳೆದ ಮೂರು ತಿಂಗಳಿಂದ ಭದ್ರಾ ಜಲಾಶಯದಿಂದ ಹರಿಯುತ್ತಿರುವ ನೀರಿನಿಂದ ಡ್ಯಾಂ ನಲ್ಲಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಮಟ್ಟದ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಬತ್ತಿ ಹೋಗಿ ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ ದಿನ ಕಳೆದಂತೆ ನೀರಿನ ಮಟ್ಟ ಹೆಚ್ಚಿಸುವ ಹಂತಕ್ಕೆ ಬಂದು ತಲುಪಿದ ಜಲಾಶಯ. ಎತ್ತ ಕಣ್ಣು ಹಾಯಿಸಿ ನೋಡಿದರು ದೂರ ದೂರಕ್ಕೆ ಕಾಣುವ ನೀರಿನ ಜಲರಾಶಿ. ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಜಲಾಶಯದ ನೀರಿನ ದೃಶ್ಯ. ಕಳೆದ ಎರಡ್ಮೂರು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಸಂಭವಿಸಿತ್ತು. ಹಾಗೂ ತೋಟಗಳು ಒಣಗಿ ತೀವ್ರ ಸಂಕಷ್ಟಕ್ಕೆ ರೈತರು ಸಿಲುಕಿದ್ದರು. ಇದೀಗ ನೀರಿನ ಬವಣೆ ನೀಗಿಸಲು ಭದ್ರಾ ಜಲಾಶಯದಿಂದ ಪ್ರತಿದಿನ ನೀರು 615 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ. ಅಜ್ಜಂಪುರ ಭಾಗದಲ್ಲಿ ಮಳೆಯಾಗಿದ್ದರಿಂದ ಬುಧವಾರ ಹಾಗೂ ಗುರುವಾರ 2878 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ. ಇನ್ನೊಂದೆರಡು ದಿನಗಳ ಕಾಲ ಆ ಭಾಗದಲ್ಲಿ ಮಳೆ ಸುರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಆಶಾಭಾವನೆ ಮೂಡಿಸಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಜಲಾಶಯ 30 ಅಡಿ ಟಿಎಂಸಿ ನೀರು ನೀರಿನ ಸಾಮರ್ಥ್ಯ ಹೊಂದಿರುವ ತಾಲೂಕಿನ ವಾಣಿ ವಿಲಾಸ ಜಲಾಶಯ ಗುರುವಾರ ಅರ್ಧದಷ್ಟು ತುಂಬಿ, ರಮಣೀಯವಾಗಿ ನೋಡುಗರನ್ನು ಕಣ್ಮನ ಸೆಳೆಯುವಂತಿದೆ.
PublicNext
07/10/2021 05:58 pm