ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬರುತ್ತಿದೆ.
ಇಂದು ನಾರಾಯಣಪುರ ಜಲಾಶಯದಿಂದ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಕೃಷ್ಣ ನದಿ ಭೋರ್ಗರೆಯುತ್ತಿದೆ.
ಸುರಪುರ ತಾಲ್ಲೂಕಿನ ಶೆಳ್ಳಗಿ ಹಾಗೂ ದೇವಾಪುರ ಸೇರಿದಂತೆ ನದಿ ಪಾತ್ರದ ರೈತರ ಜಮೀನುಗಳು ಸಂಪೂರ್ಣ ಜಲವೃತವಾಗಿವೆ.
ಅಲ್ಲದೇ ಶೆಳ್ಳಗಿ ಗ್ರಾಮಕ್ಕೆ ಹೋಗುವ ರಸ್ತೆ ನೀರಲ್ಲಿ ಮುಳುಗಡೆಯಾಗಿದ್ದಲ್ಲದೆ, ನೂರಾರು ಎಕರೆಯಲ್ಲಿ ರೈತರು ಬೆಳೆದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿದೆ. ಕಷ್ಟಪಟ್ಟು ಬೆಳೆದ ರೈತರು ಈಗ ಸಂಕಷ್ಟಪಡುವಂತಾಗಿದೆ.
ಇನ್ನು ಕೃಷ್ಣಾ ನದಿಪಾತ್ರದಲ್ಲಿರುವ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಲಿದ್ದು, ನದಿ ದಡಕ್ಕೆ ಯಾರೂ ತೆರಳದಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸೂಚಿಸಿದೆ.
PublicNext
30/07/2021 03:32 pm