ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ದೇಶದ ಹಲವು ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಫೆ. 22ರವರೆಗೂ ಬೆಂಗಳೂರಿನಲ್ಲಿ ಮೋಡದ ವಾತಾವರಣವೇ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಫೆ.23ರವರೆಗೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೈಸೂರು, ಕೊಡಗು, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಫೆ.23ರವರೆಗೂ ಗುಡುಗು ಸಹಿತ ಸಣ್ಣ ಮತ್ತು ಮಧ್ಯಮ ಪ್ರಮಾಣದ ಮಳೆಯಾಗಬಹುದು. ಬಾಗಲಕೋಟೆ, ಬೆಳಗಾವಿ, ಹಾವೇರಿ, ಗದಗ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಫೆ.22ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಫೆ.24-25ರಂದು ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಇನ್ನು ಉತ್ತರಾಖಂಡ, ಹಿಮಾಚಲಪ್ರದೇಶ, ಜಮ್ಮುಕಾಶ್ಮೀರದಲ್ಲಿ ಫೆ.22ರವರೆಗೆ ಸಣ್ಣ ಮಳೆಯ ಜತೆ, ಹಿಮಪಾತ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆಯಿಂದಲೂ ದಟ್ಟವಾದ ಮಂಜು ಆವರಿಸಿದೆ. ಬೆಳಗ್ಗೆ ಕನಿಷ್ಠ ತಾಪಮಾನ 10.4ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು.
PublicNext
20/02/2021 12:50 pm