ಶಿವಮೊಗ್ಗ: ಸಾಕಾನೆ ಮಣಿಕಂಠ ಬಿಡಾರದಿಂದ ಕಾಡಿಗೆ ತೆರಳುವ ವೇಳೆ ಕಾವಾಡಿಗನನ್ನು ಅಟ್ಟಾಡಿಸಿದ ಘಟನೆ ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಣಿಕಂಠ ಆನೆ ಬಿಡಾರದಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಜಂಗಲ್ ರೆಸಾರ್ಟ್ ಮೂಲಕ ಕಾಡಿಗೆ ತೆರಳಬೇಕಿತ್ತು.
ಈ ಸಂದರ್ಭದಲ್ಲಿ ಇನ್ನೊಬ್ಬ ಕಾವಾಡಿಗನನ್ನು ಕಂಡು ಇದ್ದಕ್ಕಿದ್ದಂತೆ ಕೋಪಗೊಂಡಿದೆ. ಮಣಿಕಂಠನ ಮೇಲೆ ಮಾವುತ ಇಮ್ರಾನ್ ಕುಳಿತಿದ್ದರು. ಕಾವಾಡಿಗ ಕಲೀಲ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದರು. ರೆಸಾರ್ಟ್ ಗೇಟ್ ಬಳಿ ಕಲೀಲ್ ಬರುತ್ತಿದ್ದಂತೆ ಆತನ ಮೇಲೆ ಮಣಿಕಂಠ ದಾಳಿಗೆ ಮುಂದಾಗಿದ್ದಾನೆ. ಆನೆಯ ಮುನಿಸಿನ ಬಗ್ಗೆ ತಿಳಿದ ಕಲೀಲ್ ಬೈಕ್ ಬಿಟ್ಟು ಅಲ್ಲಿಂದಲೇ ಓಡಿ ಹೋಗಿ ಬಚಾವ್ ಆಗಿದ್ದಾರೆ.
ಮಣಿಕಂಠ ಆನೆಯು ಕಲೀಲ್ ಅವರನ್ನು ಓಡಿಸಿಕೊಂಡು ಮತ್ತೆ ಬಿಡಾರದೊಳಗೆ ಓಡಿದೆ. ನಂತರ ಬಿಡಾರದಲ್ಲಿ ಅರಿವಳಿಕೆ ಮದ್ದು ನೀಡಲಾಯಿತು. ಆ ಬಳಿಕ ಇತರೆ ಆನೆಗಳ ಸಹಾಯದಿಂದ ಮಣಿಕಂಠನನ್ನು ನಿಯಂತ್ರಣಕ್ಕೆ ತಂದು ಕಟ್ಟಿ ಹಾಕಲಾಗಿದೆ.
ಮಣಿಕಂಠ ಕಾವಡಿಗನ ಮೇಲೆ ದಾಳಿಗೆ ಮುಂದಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತೀಚೆಗೆ, ಮಣಿಕಂಠ ತನ್ನ ಮಾವುತ ಹಾಗೂ ಕಾವಡಿಗರ ಮೇಲೆ ಇತರೆ ಆನೆಗಳ ಮೇಲೆ ಕೊಪಗೊಳ್ಳುತ್ತಿದೆ. ಈ ಹಿಂದೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ನಡೆಸಲು ಸಹ ಮುಂದಾಗಿತ್ತು.
PublicNext
12/09/2022 04:44 pm