ಗದಗ: ನಿರಂತರವಾಗಿ ಬಿಡುವಿಲ್ಲದೇ ಮಳೆ ಸುರಿಯುತ್ತಿರುವುದರಿಂದ ಗದಗ ಜಿಲ್ಲಾದ್ಯಂತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಹಾಗೂ ಅಲಸಂದೆ ಬೆಳೆ ನಿರಂತರ ಮಳೆಯಿಂದಾಗಿ ಗಿಡದಲ್ಲೇ ಮೊಳಕೆ ಒಡೆಯುತ್ತಿದೆ.
ಹೌದು, ಈ ವರ್ಷ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ರೈತರು ಉತ್ಸುಕತೆಯಿಂದ ಕೃಷಿ ಮಾಡಿದ್ದರು. ಗದಗ ಜಿಲ್ಲೆಯಾದ್ಯಂತ ರೈತರು ಸಾವಿರಾರು ಎಕರೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಹಾಗೂ ಅಲಸಂದೆ ಬಿತ್ತನೆ ಮಾಡಿದ್ರು.
ಪೂರ್ವ ಮುಂಗಾರು ಮಳೆಯು ಕಾಲಕಾಲಕ್ಕೆ ಉತ್ತಮವಾಗಿ ಬಂದು ಬೆಳೆಗೆ ವರವಾಗಿ ರೈತರಿಗೆ ಖುಷಿ ನೀಡಿತ್ತು. ಗದಗ ಜಿಲ್ಲಾಯಾದ್ಯಂತ ಬೆಳೆ ಹುಲುಸಾಗಿ ಬಂದು, ಬಂಪರ್ ಬೆಳೆ ಸಿಗುವ ಸೂಚನೆ ನೀಡಿತ್ತು. ಅದರಂತೆ ಉತ್ತಮವಾಗಿ ಫಸಲು ಸಹ ಬಂದಿತ್ತು. ಈಗ ರೈತರು ಸಂಭ್ರಮದಿಂದ ಕೊಯ್ಲಿಗೆ ಮುಂದಾಗಿರುವ ಸಂದರ್ಭದಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯು ಬೆಳೆಯ ಹಾನಿಗೆ ಕಾರಣವಾಗಿ ರೈತರನ್ನು ದುಃಖಕ್ಕೀಡು ಮಾಡಿದೆ.
ಹೊಲಗಳಲ್ಲಿಯೇ ಮೊಳಕೆ ಒಡೆಯುತ್ತಿರುವ ಹೆಸರು ಬೆಳೆಯನ್ನು ಕಂಡ ರೈತರು ಹಾಕಿರುವ ಬಂಡವಾಳವಾದರೂ ಬರಲಿ ಎಂದು ಬಂದಷ್ಟು ಹೆಸರನ್ನು ಬಿಡಿಸುತ್ತಿದ್ದಾರೆ. ಮಳೆಯ ನಡುವೆಯೇ ಮೊಳಕೆ ಒಡೆಯುತ್ತಿರುವ ಹೆಸರನ್ನು ಬಿಡಿಸುತ್ತಿದ್ದಾರೆ.
PublicNext
13/08/2022 01:27 pm