ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್. ನೋಕಿಯಾ ಕಂಪನಿಯಲ್ಲಿ ಉದ್ಯೋಗ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸ. ಹೆಸರು ಪ್ರಮೋದ್. ಅದ್ಭುತವಾಗಿ ಕನ್ನಡದಲ್ಲಿ ಬರೆಯುವ ಈ ಇಂಜಿನಿಯರ್ ಸೋಮನಾಥಪುರಕ್ಕೆ ಹೋಗಿ ಬಂದು ಬರೆದ ಕಣ್ಣಿಗೆ ಕಟ್ಟುವಂತಹ ಬರಹ ಇಲ್ಲಿದೆ.
ಬೇಲೂರು ಹಳೇಬೀಡುಗಳನ್ನು ಹಲವು ಬಾರಿ ಕಂಡಿದ್ದ ನನಗೆ, ಸೋಮನಾಥಪುರವನ್ನು ಕಾಣಬೇಕೆಂಬ ಬಯಕೆ ಬಹಳ ದಿನಗಳಿಂದ ಇತ್ತಾದರೂ, ಹೋಗುವ ಅವಕಾಶವಾಗಿರಲಿಲ್ಲ. ಕಾಲಾವಕಾಶದ ಕೊರತೆಯಿಂದಲೋ, ಸಂಗಡಿಗರು ಸಮನಸ್ಕರಾಗಿಲ್ಲದಿದ್ದುದರಿಂದಲೋ ಅಥವಾ ಮತ್ತಾವುದೋ ಕಾರಣಗಳಿಂದ ಹಲವು ಬಾರಿ ಈ ಪ್ರವಾಸವು ಸಾಕಾರಗೊಂಡಿರಲಿಲ್ಲ. ಈ ಬಾರಿ ಮತ್ತೊಮ್ಮೆ ಮೈಸೂರಿಗೆ ಹೋಗುವ ಸಂದರ್ಭ ಒದಗಿಬಂದಾಗ, ಹೇಗಾದರೂ ಸೋಮನಾಥಪುರವನ್ನು ಕಂಡು ಬರಬೇಕೆಂದು ನಿಶ್ಚಯಿಸಿದೆ. ಅಂದ ಹಾಗೆ ಅದು ಅಷ್ಟೇನೂ ಸುಲಭವಾಗಿರಲಿಲ್ಲ ಈ ಬಾರಿಯೂ. ನಮಗಿದ್ದುದು 2 ದಿನಗಳ ಕಾಲಾವಕಾಶ.
ಮೈಸೂರಿನ ಅರಮನೆ, ಬೃಂದಾವನ, ಮೃಗಾಲಯಗಳನ್ನು ಖಾಯಂ ನೋಡಬೇಕಿತ್ತು. ಒಂದು ದಿನ ಇವನ್ನೆಲ್ಲ ನೋಡಿ ಮತ್ತೊಂದು ದಿನ ಸೋಮನಾಥಪುರಕ್ಕೆ ಭೇಟಿ ನೀಡುವುದೆಂದು ಏರ್ಪಾಟಾಯಿತು. ಆದರೆ ನಾವು ಹೋಗಬೇಕಿದ್ದ ಕಾರು ಕೆಟ್ಟು ನಿಂತಿತು. ಇದರಿಂದಾಗಿ ನಮ್ಮ ಕಾರ್ಯಕ್ರಮಗಳು ಕೊಂಚ ಹಿಂದು ಮುಂದಾದವು. ಇವೆಲ್ಲದರ ನಡುವೆಯೂ ಹೇಗೋ ಚೆನ್ನಕೇಶವನ ಕೃಪೆಯಿಂದಾಗಿ ಭಾನುವಾರ ಬೆಳಗ್ಗೆ ಮೈಲಾರಿ ಹೋಟೆಲ್ ನಲ್ಲಿ ಉಪಾಹಾರ ಮುಗಿಸಿ ಸೋಮನಾಥಪುರದ ಕಡೆಗೆ ಹೊರಟೆವು.
ಮೈಸೂರಿನಿಂದ ಪೂರ್ವಕ್ಕೆ ಹಾರೋಹಳ್ಳಿ, ಬನ್ನೂರು ಮಾರ್ಗವಾಗಿ ಹೋದರೆ, ಸುಮಾರು 1 ಗಂಟೆಯ ಪ್ರಯಾಣ. ಚಳಿಗಾಲದ ಕೊನೆಯ ಹಂತದಲ್ಲಿ ನಾವು ಹೋದದ್ದರಿಂದ ಬೆಳಗಿನ ಜಾವದ ಆ ಪ್ರಯಾಣ ಬಹಳ ಹಿತವಾಗಿತ್ತು. ಮೈಸೂರಿನ ಹೊರವಲಯದಲ್ಲಿ ನೆಲೆಯೂರಿದ್ದ ಆ ಮಂಜಿನ ಮುಸುಕು ಸೂರ್ಯ ಮೇಲೆ ಬಂದಂತೆಲ್ಲ ಸರಿದು ರಸ್ತೆ ಮತ್ತಷ್ಟು ಸ್ಪಷ್ಟವಾಗಿ ಕಾಣುವಂತಾಯಿತು. ಹಾರೋಹಳ್ಳಿಯನ್ನು ದಾಟಿ ಮುಂದೆ ಬಂದಾಗ ಕಾವೇರಿ ನದಿಯ ಮೊದಲ ದರ್ಶನವಾಯಿತು. ಮನದಲ್ಲಿ ಆ ತಾಯಿಗೆ ನಮಸ್ಕರಿಸಿ, ಸೇತುವೆಯನ್ನು ದಾಟಿ ಬನ್ನೂರನ್ನು ಪ್ರವೇಶಿಸಿದೆವು.
ಬನ್ನೂರು ದಾಟಿ ಸಂತೇಮಾಳ ಎಂಬ ಗ್ರಾಮದ ಬಳಿ ಬಲಕ್ಕೆ ತಿರುಗಿದಾಗ, ಸೋಮನಾಥಪುರವನ್ನು ಸಮೀಪಿಸುತ್ತಿರುವ ಉತ್ಸಾಹ ನನ್ನಲ್ಲಿ ಹೆಚ್ಚಾಯಿತು. ಅಲ್ಲಿಂದ ಸೋಮನಾಥಪುರಕ್ಕೆ 10 ನಿಮಿಷಗಳ ಪ್ರಯಾಣವಷ್ಟೇ! ಹೊಯ್ಸಳ ರಾಜ 3ನೇ ನರಸಿಂಹನ ಆಧಿಪತ್ಯದಲ್ಲಿ ಸೋಮೆಯ ದಂಡನಾಯಕ ಈ ಗ್ರಾಮವನ್ನು ನಿರ್ಮಿಸಿದುದರಿಂದ ಇದಕ್ಕೆ ಸೋಮನಾಥಪುರವೆಂಬ ಹೆಸರು ಬಂದಿತಂತೆ.
ಸೋಮನಾಥಪುರ ಒಂದು ಸುಂದರ ಗ್ರಾಮ. ಗ್ರಾಮಕ್ಕಿಂತ ಕೊಂಚ ದೊಡ್ಡದೇ ಎನ್ನಬಹುದು. ಅಂಚೆ ಕಚೇರಿ ದಾಟಿ ಮುಂದೆ ಬರುತ್ತಿದ್ದಂತೆ, ದೇವಾಲಯದ ಸುಂದರ ಆವರಣ ನಮ್ಮ ಕಣ್ಣುಗಳನ್ನು ಸೆರೆಹಿಡಿದವು. ಪುರಾತತ್ತ್ವ ಇಲಾಖೆಯ ಸ್ವಾಧೀನದಲ್ಲಿರುವ ಈ ದೇವಾಲಯದ ಮುಂಭಾಗದಲ್ಲಿ ಒಂದು ಸುಂದರ ಉಪವನವಿದೆ. ಬಣ್ಣಬಣ್ಣದ ಪುಷ್ಪಗಳು, ಹಸಿರು ಹುಲ್ಲಿನ ಹಾಸು, ಅದರ ಮೇಲೆ ಚೆಲ್ಲಿದ್ದ ಇಬ್ಬನಿಯ ಹನಿಗಳು, ಕುಳಿತು ವಿಹರಿಸುತ್ತಿದ್ದ ಬೆಳ್ಳಕ್ಕಿಗಳು- ಎಲ್ಲವೂ ನಮಗೆ ಸ್ವಾಗತ ಕೋರಿದವು. ಪ್ರವೇಶ ಶುಲ್ಕ ಪಾವತಿಸಿ, ಚೀಟಿ ಪಡೆದು ಉಪವನದ ನಡುವೆ ಕಾಲುದಾರಿಯನ್ನು ಅನುಸರಿಸಿ ಮುನ್ನಡೆದ ನಮಗೆ ದೇವಾಲಯದ ಪ್ರವೇಶದ್ವಾರ ಎದುರಾಯಿತು. ಪ್ರವೇಶದ್ವಾರದ ಗೋಪುರದ ಭಗ್ನಾವಶೇಷ ಮಾತ್ರ ಈಗ ಉಳಿದಿದೆ. ಆ ಗೋಪುರದ ಗತವೈಭವವನ್ನು ಕಲ್ಪಿಸಿಕೊಂಡು ಮನಸ್ಸಿಗೆ ಕೊಂಚ ದುಃಖವಾಯಿತು. ಹಳೆಯ ಕಟ್ಟಡದ ದುರಸ್ತಿಗಾಗಿ ಕೆಲವು ಇಟ್ಟಿಗೆಯ ಗೋಡೆಗಳನ್ನು ಪುರಾತತ್ತ್ವ ಇಲಾಖೆಯವರು ನಿರ್ಮಿಸಿದ್ದಾರೆ. ಅದರಿಂದ ದೇವಾಲಯದ ಸೌಂದರ್ಯಕ್ಕೆ ಹಾನಿಯಾಗಿದೆಯೆಂದೇ ಹೇಳಬಹುದು. ಅದನ್ನು ಲೆಕ್ಕಿಸದೆ ಮುನ್ನಡೆದೆವು.
ಒಳಾಂಗಣವನ್ನು ಪ್ರವೇಶಿಸುತ್ತಿದಂತೆಯೇ ಒಂದು ಬಗೆಯ ಶಾಂತತೆ ಮನಸ್ಸನ್ನು ಆವರಿಸಿತು. ಭವ್ಯವಾದ ವೇಸರ ಶೈಲಿಯಲ್ಲಿ ನಿರ್ಮಿತವಾದ ದೇವಾಲಯವು ನಮ್ಮ ಕಣ್ಣುಗಳನ್ನು ಆಕರ್ಷಿಸಿತು. ದೊಡ್ಡ ಪ್ರಾಂಗಣ. ನಡುವಿನಲ್ಲಿ ನಕ್ಷತ್ರಾಕಾರದ ಅಧಿಷ್ಠಾನದ ಮೇಲೆ ನಿಂತಿರುವು ಮೂರು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ(ತ್ರಿಕೂಟ). ಅಧಿಷ್ಠಾನ, ಭಿತ್ತಿ, ಪ್ರಸ್ತರ, ಗ್ರೀವ, ಶಿಖರ ಮತ್ತು ಸ್ತೂಪಿಗಳೆಲ್ಲದರಲ್ಲೂ ರಾರಾಜಿಸುತ್ತಿರುವ ಕೆತ್ತನೆಗಳು! ಅಬ್ಬಾ! ನೋಡಲು ಅದೆಷ್ಟು ಸುಂದರ. ಈ ದೇವಾಲಯದ ವಾಸ್ತುಶಿಲ್ಪ, ಅಲ್ಲಿ ಬಿಂಬಿತವಾಗಿರುವ ಪೌರಾಣಿಕ ಸಂದರ್ಭಗಳು, ಕೆತ್ತಿರುವ ದೇವಾನುದೇವತೆಗಳ ಮೂರ್ತಿಗಳು- ಇವೆಲ್ಲದರ ವಿಷಯವಾಗಿ ಹೆಚ್ಚು ತಿಳಿಯಬೇಕು ಎಂದೆನಿಸಿತು. ಆ ಹೊತ್ತಿಗೆ ಹೆಚ್ಚು ಪ್ರವಾಸಿಗಳು ಇನ್ನೂ ಬಂದಿರಲಿಲ್ಲವಾದ್ದರಿಂದ ಆವರಣ ಶಾಂತಮನೋಹರವಾಗಿ ಗೋಚರಿಸಿತು. ಅಲ್ಲಿ ಸರ್ಕಾರದಿಂದ ನಿಯೋಜಿಸಲ್ಪಟ್ಟ ಒಬ್ಬ ಮಾರ್ಗದರ್ಶಿಯನ್ನು ಜೊತೆಮಾಡಿಕೊಂಡು ದೇವಾಲಯವನ್ನು ನೋಡಲಾರಂಭಿಸಿದೆವು.
ಮೊದಲಿಗೆ ಪ್ರದಕ್ಷಿಣಾ ಪಥದಲ್ಲಿ ನಮ್ಮನ್ನು ಕರೆದೊಯ್ದ ಆಕೆ ಅಲ್ಲಿ ಕೆತ್ತಿರುವ ರಾಮಾಯಣ, ಮಹಾಭಾರತ ಸಂದರ್ಭಗಳನ್ನು ನಮಗೆ ಪರಿಚಯಿಸಿದರು. ಬಕಾಸುರನ ಸಂದರ್ಭವಂತೂ ಬಹಳ ಸುಂದರವಾಗಿ ಆ ಶಿಲೆಗಳ ಮೇಲೆ ಮೂಡಿಬಂದಿದೆ. ಕುಳಿತಿರುವ ಭಂಗಿಯಲ್ಲಿರುವ ವಿಷ್ಣುವಿನ ಕೆತ್ತನೆಯನ್ನು ನಾವಿಲ್ಲಿ ಕಂಡೆವು. ಈ ಭಂಗಿಯಲ್ಲಿ ವಿಷ್ಣು ಕಾಣುವುದು ಕೊಂಚ ಅಪರೂಪವೇ ಎನ್ನಬೇಕು. ಯುದ್ಧದಲ್ಲಿ ಹೋರಾಡಿ ಮಡಿದ ವೀರಯೋಧನೊಬ್ಬನನ್ನು ಅಪ್ಸರೆಯರು ಬಂದು ಸ್ವರ್ಗಕ್ಕೆ ಕರೆದೊಯ್ಯುವ ಒಂದು ಸಂದರ್ಭವನ್ನು ಭಿತ್ತಿಯ ಮೇಲೆ ಕೆತ್ತಲಾಗಿದೆ. ಈ ಕೆತ್ತನೆಯೂ ಬಹಳ ಮನೋಹರವಾಗಿದೆ. ಮತ್ತು ಆ ಕಾಲದ ಜನರು ಸಮಾಜದಲ್ಲಿ ಕ್ಷಾತ್ರಕ್ಕೆ ನೀಡಿದ್ದ ಸ್ಥಾನವನ್ನು ಬಿಂಬಿಸುವಂತಿದೆ. ಮರದಡಿಯಲ್ಲಿ ನಿಂತು ಕೊಳಲನ್ನೂದುವ ವೇಣುಗೋಪಾಲ, ಮೋಹಿನಿ ಅವತಾರದಲ್ಲಿರುವ ವಿಷ್ಣು, ನೃತ್ಯ ಭಂಗಿಯಲ್ಲಿ ಸೆರೆಯಾದ ಗಣೇಶ, ವೀಣಾಪಾಣಿ ಸರಸ್ವತಿ – ಹೀಗೆ ಹತ್ತು ಹಲವಾರು ಮನೋಜ್ಞ ಕೆತ್ತನೆಗಳನ್ನು ನಾವು ಹೊರಗೋಡೆಗಳಲ್ಲಿ ಕಾಣಬಹುದಾಗಿದೆ.
ದೇವಾಲಯವನ್ನು ಪ್ರವೇಶಿದಾಗ ನಮ್ಮನ್ನು ಸೆಳೆದದ್ದು ಆ ನುಣುಪಾದ ಕಲ್ಲಿನಿಂದ ಕೆತ್ತಿರುವ ಸ್ಥಂಭಗಳು. ಅದಾವ ಪರಿಕರಗಳನ್ನು ಬಳಸಿ ಆ ರೀತಿ ವೃತ್ತಾಕಾರದ ಸ್ಥಂಭಗಳನ್ನು ರಚಿಸಿದರೋ! ತಲೆಯೆತ್ತಿ ಛಾವಣಿಯನ್ನು ನೋಡಿದರೆ ಅಲ್ಲಿಯೂ ಅಮೋಘ ಕೆತ್ತನೆಗಳು. ಕಮಲದ ಮೊಗ್ಗು ಅರಳಿ ಹೂವಾಗುವುದನ್ನು ಹಂತಹಂತವಾಗಿ ಕಲ್ಲಿನಲ್ಲಿ ಕೆತ್ತಿರುವುದನ್ನು ಕಂಡಾಗಲಂತೂ ನಮ್ಮ ಮೈಮನಗಳು ಪುಳಕಗೊಂಡವು. ಮೊಗ್ಗಿನಂತೆ ಮುದುಡಿದ ಮನಸ್ಸು ದೇವಾಲಯವನ್ನು ಪ್ರವೇಶಿಸಿ, ಗರ್ಭ ಗುಡಿಯನ್ನು ಸಮೀಪಿಸುತ್ತಿದ್ದಂತೆ ಅರಳುತ್ತದೆ ಎನ್ನುವುದರ ಸಂಕೇತವಾಗಿ ಈ ಕೆತ್ತನೆಯನ್ನು ಛಾವಣಿಯಲ್ಲಿ ಮಾಡಿದ್ದಾರೆ ಎಂದು ತಿಳಿದಾಗಲಂತೂ ನನಗೆ ರೋಮಾಂಚನವಾಯಿತು. ಅದೆಂಥಾ ಅಮೋಘ ಕಲ್ಪನೆ! ಕಲ್ಲರಳಿ ಹೂವಾಯಿತು ಎಂಬುದರ ಸಾಕ್ಷಾತ್ ನಿದರ್ಶನ ನಮಗಿಲ್ಲಿ ಸಿಗುತ್ತದೆ. ಒಳಗಡೆ ಮೂರು ಗರ್ಭಗುಡಿಗಳಿವೆ- ಚೆನ್ನಕೇಶವ, ಜನಾರ್ದನ ಮತ್ತು ವೇಣುಗೋಪಾಲ ಎಂಬ ಮೂರು ವಿಷ್ಣುವಿನ ರೂಪಗಳನ್ನು ಇಲ್ಲಿ ಪೂಜಿಸಲಾಗುತ್ತಿತ್ತು ಎಂದು ತಿಳಿದುಬರುತ್ತದೆ. ಚೆನ್ನಕೇಶವನ ಮೂರ್ತಿ ಈಗ ಅಲ್ಲಿಲ್ಲ. ಆದರೆ ಮೂಲಭೇರ ವಿಗ್ರಹಗಳ ನೀಲಿನಕ್ಷೆ ಎಂಬಂತೆ ಹೊರ ಗೋಡೆಗಳಲ್ಲಿ ಈ ಮೂರೂ ರೂಪಗಳನ್ನು ಶಿಲ್ಪಿ ಕೆತ್ತಿದ್ದಾನೆ. ಆ ಆಧಾರದ ಮೇಲೆ, ಮೂಲ ವಿಗ್ರಹಗಳು ಅದೆಷ್ಟು ಚೆನ್ನಾಗಿದ್ದಿರಬಹುದೆಂದು ನಾವು ಊಹಿಸಬಹುದಷ್ಟೇ.
ಕೆಲವಾರು ಚಿತ್ರಗಳನ್ನು ಸೆರೆಹಿಡಿದು, ನಮ್ಮ ಮಾರ್ಗದರ್ಶಿಗೆ ಧನ್ಯವಾದಗಳನ್ನು ಸಮರ್ಪಿಸಿ, ಅಲ್ಲಿಂದ ಹೊರನಡೆದೆವು. ಆ ಸೌಂದರ್ಯವನ್ನು ಕಂಡು ಆದ ಆನಂದ ಒಂದೆಡೆಯಾದರೆ, ಇಂತಹ ದೇವಾಲಯವನ್ನು ದಾಳಿಯಿಂದ ರಕ್ಷಿಸಲಾಗಲಿಲ್ಲವಲ್ಲ ಎಂಬ ನೋವು ಇನ್ನೊಂದೆಡೆ. ದಾಳಿಯನ್ನು ತಾಳಿಕೊಂಡು, ಇಷ್ಟು ಶತಮಾನಗಳ ತರುವಾಯವೂ ಸೌಂದರ್ಯದ ಪ್ರತೀಕವಾಗಿ ನಿಂತಿರುವ ಈ ದೇವಾಲಯ, ನಿರ್ಮಿಸಿದ ಹೊಸತರಲ್ಲಿ ಹೇಗಿದ್ದಿರಬಹುದು ಎಂಬ ಕಲ್ಪನೆಯಲ್ಲಿ ನನ್ನ ಮನಸ್ಸು ಮುಳುಗಿತ್ತು. ದೆಹಲಿ ಸುಲ್ತಾನರ ದಾಳಿಯಿಂದ ಈ ದೇವಾಲಯಕ್ಕೆ ಮಾತ್ರವಲ್ಲ, ಭಕ್ತರು-ಸಹೃದಯ ರಸಿಕರಿಗೆಲ್ಲ ಆಗಿರುವ ನಷ್ಟ ಅಗಣ್ಯ! ಆದರೂ, ಇಷ್ಟಾದರೂ ನಮಗೆ ಲಭ್ಯವಾಗಿದೆಯಲ್ಲ! ಇದನ್ನು ನೋಡಿದ ನಮ್ಮ ಕಣ್ಣುಗಳೇ ಧನ್ಯ ಎಂದು ಮನದಲ್ಲಿ ಚೆನ್ನಕೇಶವನಿಗೆ ಮತ್ತೊಮ್ಮೆ ನಮಿಸಿ ತಲಕಾಡಿನತ್ತ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.
ಕೃಪೆ: ಕನ್ನಡ ಟ್ರಾವೆಲ್
PublicNext
23/12/2020 04:12 pm