ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕನ್ಯಾಕುಮಾರಿಯಲ್ಲಿ ಗುರುವಾರ (ಡಿಸೆಂಬರ್ 3)ರಂದು ‘ಬುರೇವಿ’ ಚಂಡಮಾರುತ ಅಪ್ಪಳಿಸಲಿದೆ.
ಚಂಡಮಾರುತದ ಪ್ರಭಾವ ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಡಿ.3 ಮತ್ತು 4ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು, ಬುರೇವಿ ಚಂಡಮಾರುತವು ಡಿಸೆಂಬರ್ 2ರಂದು ಶ್ರೀಲಂಕಾ ಕರಾವಳಿ ದಾಟಲಿದೆ. ಇದರಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕೆಲವು ಭಾಗಗಳಲ್ಲಿ ಹೆಚ್ಚು ಮಳೆ ತರಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಅಲರ್ಟ್ ಸಹ ನೀಡಲಾಗಿದೆ. ಡಿ.4ರವರೆಗೆ ಚಂಡಮಾರುತ ಇರಲಿದೆ' ಎಂದು ವಿವರಿಸಿದ್ದಾರೆ.
ರಾಜ್ಯದ ದಾವಣಗೆರೆ, ಶಿವಮೊಗ್ಗ, ಹಾಸನ, ಬೀದರ್, ವಿಜಯಪುರ, ಬೆಳಗಾವಿ, ಗದಗ ಹಾಗೂ ಧಾರವಾಡ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬುಧವಾರ ಕನಿಷ್ಠ ತಾಪಮಾನದಲ್ಲಿ ಸರಾಸರಿ 4-6 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಡಿ.3ರಿಂದ ಡಿ.6ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾದರೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ.
PublicNext
02/12/2020 09:06 pm