ಮೈಸೂರು : ಜಿಲ್ಲಾಧಿಕಾರಿ ಕಾರ್ಯಾಲಯ ವತಿಯಿಂದ ಜಿಲ್ಲೆಯ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ 41 ಇಜಿಪಿ-2022 ಅನ್ನು 2022 ರ ಅ.3 ರಲ್ಲಿ ವೇಳಾಪಟ್ಟಿಪ್ರಕಟಿಸಲಾಗಿದೆ.
ಜಿಲ್ಲಾಧಿಕಾರಿಗಳು ಅ. 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅ. 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಅ. 19 ರಂದು ನಾಮಪತ್ರ ಪರಿಶೀಲನೆ, ಅ. 22 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಅ. 28 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಅನಿವಾರ್ಯವಾದರೆ ಅ. 30 ರಂದು ಮರು ಮತದಾನ ನಡೆಯಲಿದೆ. ಅ. 31 ರಂದು ಮತ ಎಣಿಕೆ ನಡೆಯುವುದು.
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸಂಬಂಧ ಉಪಚುನಾವಣೆ ನಡೆಯುವ 4 ಗ್ರಾಪಂಗಳಲ್ಲಿನ 4 ಸದಸ್ಯ ಸ್ಥಾನಗಳ ವಿವರ: ನಂಜನಗೂಡು ತಾಲೂಕು ರಾಂಪುರ ಗ್ರಾಪಂನ ರಾಂಪುರ-2 ಕ್ಷೇತ್ರ, ಬಿಳಿಗೆರೆ ಗ್ರಾಪಂನ ಕಾಮಹಳ್ಳಿಯಲ್ಲಿ ತೆರವಾಗಿರುವ ಕ್ಷೇತ್ರದಲ್ಲಿ ಖಾಲಿ ಇರುವ ಒಂದು ಸ್ಥಾನ, ಟಿ.ನರಸೀಪುರ ತಾಲೂಕು ಕೊತ್ತೇಗಾಲ ಗ್ರಾಪಂನ ಕೊತ್ತೇಗಾಲದಲ್ಲಿ ತೆರವಾದ ಕ್ಷೇತ್ರದಲ್ಲಿ ಖಾಲಿ ಇರುವ ಸ್ಥಾನ 1, ಕೆ.ಆರ್. ನಗರ ತಾಲೂಕು ಹಳಿಯಾರು ಗ್ರಾಪಂನ ಜವರೇಗೌಡನ ಕೊಪ್ಪಲಿನಲ್ಲಿ ತೆರವಾಗಿರುವ ಕ್ಷೇತ್ರದಲ್ಲಿ ಖಾಲಿ ಇರುವ ಸ್ಥಾನ 1ಕ್ಕೆ ಚುನಾವಣೆ ನಡೆಯಲಿದೆ.
ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿಯಂತೆ ಸಂಬಂಧಿಸಿದ ಗ್ರಾಪಂ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ನಿಗದಿಪಡಿಸಿರುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವರು. ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಂಬಂಧಿಸಿದ ಗ್ರಾಪಂ ಕಚೇರಿ ವೇಳಾಪಟ್ಟಿಯಲ್ಲಿ ಸಲ್ಲಿಸಬಹುದು.
ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾಪಂ ಚುನಾವಣೆಗಳ ಮತಪತ್ರದಲ್ಲಿ ನೋಟಾ (ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
Kshetra Samachara
12/10/2022 12:39 pm