ನಂಜನಗೂಡು: ಸಿಎಂ ಸಿದ್ದರಾಮಯ್ಯ ತವರು ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ.
ಈ ದೇವಾಲಯದ ಅಭಿವೃದ್ಧಿಯ ನೆಪ ಹೇಳಿ ಕಾರ್ಖಾನೆಯ ಮಾಲೀಕರು ಮತ್ತು ಉದ್ಯಮಿಗಳಿಂದ ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯ ಬಳಿಯಿಂದಲೂ ಮಧ್ಯವರ್ತಿ ವಂಚಕರು ಬಾರಿ ಪ್ರಮಾಣದ ಹಣ ವಸೂಲಾತಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಾಂಡವಪುರ ಗ್ರಾಮದ ಶ್ರೀ ಪ್ರಸನ್ನ ನಂಜುಂಡೇಶ್ವರನ ಸ್ವಾಮಿ ದೇವಾಲಯ ಸರಿಸುಮಾರು 800 ವರ್ಷಗಳ ಇತಿಹಾಸ ಇರುವ ಅನಾದಿಕಾಲದ ಪ್ರಸಿದ್ದಿ ಮತ್ತು ಪ್ರಖ್ಯಾತಿ ದೇವಾಲಯವಾಗಿದೆ. ನಂಜುಂಡೇಶ್ವರನ ದೇವಾಲಯಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಭಕ್ತ ಸಮೂಹ ಚಿಕ್ಕಯ್ಯಛತ್ರ ಬಳಿ ಇರುವ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿ ಸಾಕಷ್ಟು ಭಕ್ತ ಸಮೂಹ ಅಪಾರ ನಂಬಿಕೆಯನ್ನು ಇಟ್ಟು ಅಮಾವಾಸ್ಯೆ ಹುಣ್ಣಿಮೆ ವಿಶೇಷ ದಿನಗಳಲ್ಲಿ ತಂಡೋಪ ತಂಡವಾಗಿ ಆಗಮಿಸಿ ತಮ್ಮ ಬೇಡಿದ ಕಾರ್ಯ ಈಡೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಕಾರ್ತಿಕ ಮಾಸದ ಕೊನೆಯ ಸೋಮವಾರ ಈ ದೇವಾಲಯದಲ್ಲಿ ಸಾಕಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರುವ ಜಾತ್ರಾ ಮಹೋತ್ಸವ ಕಾರ್ಯ ನಡೆಯಲಿದೆ.
ಈ ದಿನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ವಂಚಕರು ಅದ್ದೂರಿ ಕಾರ್ಯ ಮಾಡಬೇಕು ಎಂಬ ನೆಪವೊಡ್ಡಿ ಸರ್ಕಾರಿ ಸುಪರ್ದಿಯಲ್ಲಿರುವ ದೇವಾಲಯದ ಹೆಸರೇಳಿ ತಾಂಡವಪುರ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಮಾಲೀಕರುಗಳಿಂದ ವಂಚಕರು ನಕಲಿ ರಶೀದಿಗಳನ್ನು ಬಳಸಿಕೊಂಡು ಲಕ್ಷಾಂತರ ಹಣವನ್ನು ವಸೂಲಿ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ತಾಂಡವಪುರ ಗ್ರಾಮ ಪಂಚಾಯಿತಿಯ ಸದಸ್ಯ ಚಂದ್ರು ಮತ್ತು ಗ್ರಾಮಸ್ಥರು ಗಂಭೀರವಾಗಿ ದಾಖಲಾತಿ ಮೂಲಕ ಆರೋಪಿಸಿದ್ದಾರೆ.
ಪೊಲೀಸ್ ಠಾಣೆ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ದೂರನ್ನು ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಿಟಿ ಕುಮಾರ್ ಎಂಬುವವರಿಂದಲೂ ಕೂಡ ಐವತ್ತು ಸಾವಿರಕ್ಕೂ ಅಧಿಕ ಹಣವನ್ನು ವಂಚಕರು ನಕಲಿ ರಶೀದಿ ನೀಡಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಸ್ಪಷ್ಟವಾಗಿ ತಿಳಿದ ತಾಂಡವಪುರ ಚಿಕ್ಕಯ್ಯನ ಚಿತ್ರ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ರವರ ನೇತೃತ್ವದಲ್ಲಿ ನಂಜುಂಡೇಶ್ವರನ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಮತ್ತು ಮೈಸೂರು ಜಿಲ್ಲಾ ಮುಜರಾಯಿ ಇಲಾಖೆ ಅಧಿಕಾರಿಗೆ ದೂರು ನೀಡಲಾಗಿದೆ. ವಂಚಕರ ಜಾಡು ಹಿಡಿದು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ಸರಿಯಾದ ಪಾಠ ಕಲಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
20/11/2024 03:16 pm