ಮಂಗಳೂರು: ನಗರದ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದದಳ ಕಚೇರಿಯಲ್ಲಿ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರ, ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಪ್ರಾಯೋಜಕತ್ವದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಜೀವರಕ್ಷಾ ಟ್ರಸ್ಟ್, ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ಆಶ್ರಯದಲ್ಲಿ ನಡೆಯಿತು.
ಸುಮಾರು 15 ಮಂದಿ ಗೃಹರಕ್ಷಕರು ಮತ್ತು 5 ಮಂದಿ ಪೌರರಕ್ಷಣ ತಂಡದ ಕಾರ್ಯಕರ್ತರು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಮಾತನಾಡಿ ಜನರ ಜೀವ ಉಳಿಸಲು ಗೃಹರಕ್ಷಕರನ್ನು ತರಬೇತಿಗೊಳಿಸಿ ಜೀವರಕ್ಷಕರನ್ನಾಗಿ ತಯಾರಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ. ಅಪಘಾತ ಅಥವಾ ಇನ್ನಾವುದೇ ಅವಘಡಗಳಾದ ತಕ್ಷಣವೇ ಸ್ಪಂದಿಸಲು ಈ ತರಬೇತಿ ಗೃಹರಕ್ಷಕರಿಗೆ ಅನುಕೂಲವಾಗುತ್ತದೆ ಎಂದರು.
ಜೀವರಕ್ಷಾ ಟ್ರಸ್ಟ್ ಮಂಗಳೂರು ವಲಯದ ಅಧಿಕಾರಿ ಡಾ.ಕಿಶನ್ ರಾವ್ ಬಾಳಿಲ ಮಾತನಾಡಿದರು.
ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಅಧ್ಯಕ್ಷ ಶ್ಯಾಮ್ ಲಾಲ್ ಸದಸ್ಯರಾದ ಪ್ರವೀಣ್ ಉಡುಪ, ಅಶೋಕ್ ರಾವ್, ಎಸ್ ವಿ.ಎಸ್. ವರ್ಮಾ, ವೀಣಾ, ಶ್ಯಾಮ್ ಲಾಲ್, ರಂಗನಾಥ್ ಕಿಣಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ|| ನಮ್ರತಾ ಶೆಟ್ಟಿ ಮತ್ತು ಡಾ|| ನಿಶಾಂತ್ ಕೃಷ್ಣ ಅವರು ಭಾಗವಹಿಸಿದ್ದರು. ಫಾದರ್ ಮುಲ್ಲರ್ ಆಸ್ಪತ್ರೆಯ ಗೃಹ ವೈದ್ಯರಾದ ಡಾ || ಜಸ್ಟಿನ್ ಮತ್ತು ಡಾ|| ಗಾಯತ್ರಿ ಈ ತರಬೇತಿಗೆ ಸಹಕರಿಸಿದರು.
Kshetra Samachara
27/08/2022 08:01 am