ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಇದರ ಸುರತ್ಕಲ್ ವಲಯ ಕಚೇರಿಯನ್ನು ಶನಿವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು, "ಸುರತ್ಕಲ್ ನಲ್ಲಿ ಹೈಟೆಕ್ ಆಗಿರುವ ವಿಭಾಗೀಯ ಕಚೇರಿ ಪ್ರಾರಂಭಗೊಂಡಿದೆ. ಇದಕ್ಕಾಗಿ ಪಾಲಿಕೆ ಮೇಯರ್ ಸಹಿತ ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಜನರು ಸಕಾಲದಲ್ಲಿ ಸರಕಾರಿ ಸೇವೆಗಳನ್ನು ಬಳಸಿಕೊಳ್ಳಲು ಇದು ನೆರವಾಗಲಿದೆ" ಎಂದು ಶುಭ ಹಾರೈಸಿದರು.
ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ಅವರು ಮಾತಾಡುತ್ತಾ, "ಸುರತ್ಕಲ್ ವಲಯ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾರಿಗೂ ಕಾಯದೆ ಟೋಕನ್ ಪಡೆದು ಸುಗಮವಾಗಿ ಸೇವೆ ಪಡೆದುಕೊಳ್ಳಬಹುದು. ಸ್ಥಳೀಯ ಕಾರ್ಪೋರೇಟರ್ ಗಳು, ಅಧಿಕಾರಿಗಳು ಇಲ್ಲಿ ಸದಾಕಾಲ ಲಭ್ಯರಿರಲಿದ್ದು ಜನರು ಒಳ್ಳೆಯ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಸುರತ್ಕಲ್ ನಲ್ಲಿ ಬಹುಕಾಲದ ಬೇಡಿಕೆಯಾದ ವಲಯ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ಜನರು ಮಂಗಳೂರಿಗೆ ಅಲೆದಾಡುವುದು ತಪ್ಪಲಿದೆ" ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, "ಈ ಭಾಗದ ಜನರ ಬಹುಕಾಲದ ಬೇಡಿಕೆ ನೆರವೇರಿದೆ. ಇದಕ್ಕಾಗಿ ನಗರ ಪಾಲಿಕೆ ವತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜನರಿಗೆ ಸುಲಭವಾಗಿ ಎಲ್ಲಾ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಈ ಕಚೇರಿ ನೆರವಾಗಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೋರೇಟರ್ ಗಳಾದ ನಯನ ಕೋಟ್ಯಾನ್ , , ಲಕ್ಷ್ಮೀ ಶೇಖರ್ ದೇವಾಡಿಗ, ಶೋಭಾ ರಾಜೇಶ್, ಶ್ವೇತಾ ಪೂಜಾರಿ,ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ,ನಯನ ಕೋಟ್ಯಾನ್, ಸುಮಿತ್ರಾ,ವರುಣ್ ಚೌಟ,ವೇದಾವತಿ, ಸುನೀತಾ ಸಾಲಿಯಾನ್, ಪ್ರಶಾಂತ್ ಮೂಡಾಯಿಕೋಡಿ, ಭರತ್ ರಾಜ್,ವಿಠಲ್ ಸಾಲ್ಯಾನ್, ರಾಘವೇಂದ್ರ, ಮಹೇಶ್ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/08/2022 08:22 pm