ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ಮೆಸ್ಕಾಂ ಇಲಾಖೆ ನಿರ್ಲಕ್ಷ, ಖಾಲಿ ಜಾಗಕ್ಕೆ ದುಬಾರಿ ತೆರಿಗೆ, ರಸ್ತೆ ನಗರ ಪಂಚಾಯತಿಗೆ ಬರೆದು ಕೊಡದೆ ಕಾಮಗಾರಿ ನಡೆಸಿದ್ದಕ್ಕೆ ಆಕ್ಷೇಪ ಮೊದಲಾದ ವಿಷಯಗಳ ಕುರಿತು ಚರ್ಚೆ ಅಧ್ಯಕ್ಷ ಸುಭಾಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಮೊದಲು ಮುಲ್ಕಿ ಮೆಸ್ಕಾಂ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ದೂರುಗಳ ಬಗ್ಗೆ ಮೆಸ್ಕಾಂ ಕಚೇರಿಗೆ ದೂರವಾಣಿ ಮಾಡಿದರೆ ಸಂಪರ್ಕ ಸಿಗುತ್ತಿಲ್ಲ ಎಂದು ದೂರಿದರು.
ನ. ಪಂ ಸದಸ್ಯ ಮಂಜುನಾಥ ಕಂಬಾರ ಮಾತನಾಡಿ ಗೂಡಂಗಡಿ ಹಾಗೂ ಕೆಲ ಮನೆಗಳಿಗೆ ನಗರ ಪಂಚಾಯತ್ ಪರವಾನಿಗೆ ಇಲ್ಲದೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ಚರ್ಚೆ ನಡೆಯಿತು. ಆಗ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಧ್ಯಪ್ರವೇಶಿಸಿ ವಿದ್ಯುತ್ ಸಂಪರ್ಕಕ್ಕೆ ನಗರ ಪಂಚಾಯಿತಿಯಿಂದ ನಿರಾಪೇಕ್ಷಣ ಪತ್ರ ಪಡೆದುಕೊಳ್ಳಬೇಕು ಎಂದು ಸ್ಪಷ್ಟನೆ ನೀಡಿ ಪ್ರಕರಣ ತಿಳಿಗೊಳಿಸಿದರು.
ವಿಪಕ್ಷ ನಾಯಕಿ ವಿಮಲಾ ಪೂಜಾರಿ ಮಾತನಾಡಿ ನ.ಪಂ. ವ್ಯಾಪ್ತಿಯ ವನಭೋಜನ ಬಳಿ ಮನೆಯ ಖಾಸಗಿ ರಸ್ತೆ ಕಾಮಗಾರಿಗೆ ಇಂಟರ್ಲಾಕ್ ಅಳವಡಿಸಿದ್ದಾರೆ, ರಸ್ತೆ ನ ಪಂ ಗೆ ಬರೆದು ಕೊಟ್ಟಿಲ್ಲದಿದ್ದರೂ ಕಾಮಗಾರಿ ನಡೆಸಿದ್ದಾರೆ, ನಾವು ಇದೇ ರೀತಿ ರಸ್ತೆಗೆ ಕಾಮಗಾರಿ ಮಾಡಲು ಹೇಳಿದರೆ ಕಾನೂನು ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದರು.
ನ.ಪಂ.ವ್ಯಾಪ್ತಿಯಲ್ಲಿ ಖಾಲಿ ನಿವೇಶನಕ್ಕೆ ತೆರಿಗೆ ದುಬಾರಿಯಾಗಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಆಕ್ಷೇಪ ವ್ಯಕ್ತಪಡಿಸಿದರು.
ನಗರ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸುವಾಗ ನೀರಿನ ಬಿಲ್ ಹಾಗೂ ತೆರಿಗೆ ಮತ್ತಿತರ ಬಾಕಿ ವಸೂಲಾತಿ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸದಸ್ಯ ಈರಣ್ಣ ಅರಳಗುಂಡಿ ಆರೋಪಿಸಿದರು.
ಇದಕ್ಕೆ ಮುಖ್ಯಾಧಿಕಾರಿ ಮಾತನಾಡಿ ಯಾರಿಗೂ ಒತ್ತಾಯಪೂರ್ವ ಕಿರುಕುಳ ನೀಡಿಲ್ಲ ನೀಡುವುದು ಇಲ್ಲ, ಮಧ್ಯವರ್ತಿಗಳಿಗೆ ಅವಕಾಶವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ "ಘರ್ ಘರ್ ತಿರಂಗ" ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ, ನಗರ ಪಂಚಾಯತ್ ವ್ಯಾಪ್ತಿಯ ಬೀದಿ ನಾಯಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ಚರ್ಚೆ ನಡೆಯಿತು.
ನಗರ ಪಂಚಾಯತ್ ಉಪಾಧ್ಯಕ್ಷ ಸತೀಶ್ ಅಂಚನ್ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿ ಸಭೆಯಲ್ಲಿ ಉಪಸ್ಥಿತರಿದ್ದರು
Kshetra Samachara
30/07/2022 02:52 pm