ಮುಲ್ಕಿ:ಪಡುಪಣಂಬೂರು ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು, ತೋಟಗಾರಿಕಾ ಇಲಾಖೆ ಸಹಿತ ಹಲವು ಇಲಾಖೆ ಅಧಿಕಾರಿಗಳು ಗೈರಾಗಿದ್ದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಯಾವುದೇ ದೂರಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಗೆ ದೂರು ನೀಡಿದರೆ ಇಲಾಖೆಯ ಸಿಬ್ಬಂದಿಗಳು ಬೈಕ್ ನಿಂದ ಇಳಿಯುವುದೇ ಇಲ್ಲ, ಪಂಚಾಯತ್ ವ್ಯಾಪ್ತಿಯ ಕೆಲ ಕಡೆ ಮರಗಳು ವಿದ್ಯುತ್ ತಂತಿಗೆ ತಾಗಿಕೊಂಡು ಇದ್ದು ಅಪಾಯ ಸಂಭವಿಸುವ ಸಾಧ್ಯತೆ ಇದ್ದರೂ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲ ಕಡೆ ಅನಿಯಮಿತ ವಿದ್ಯುತ್ ನಿಲುಗಡೆಯಾಗುತ್ತಿದ್ದು ಈ ಬಗ್ಗೆ ಪಂಚಾಯತ್ ಅಧ್ಯಕ್ಷರು ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಮಾತಿಗೆ ಬೆಲೆ ಇಲ್ಲದಂತೆ ಆಗಿದೆ ಎಂದು ಸ್ವತಃ ಅಧ್ಯಕ್ಷರು ಹೇಳಿದಾಗ ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥ ಶಾಹುಲ್ ಹಮೀದ್ ಮಾತನಾಡಿ ಅಧ್ಯಕ್ಷರ ಮಾತಿಗೆ ಬೆಲೆ ಇಲ್ಲದಿದ್ದರೆ ಸಾಮಾನ್ಯರ ಗತಿ ಏನು? ಎಂದು ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತೋಕೂರು ಬಳಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಖಾಸಗಿ ಜಾಗದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿದ್ದಾರೆ ಎಂದು ದೂರಿದ ಗ್ರಾಮಸ್ಥ ಹರೀಶ್ ಶೆಟ್ಟಿ ಈ ಬಗ್ಗೆ ಮೆಸ್ಕಾಂ ಮೇಲಾಧಿಕಾರಿಗಳಿಗೆ ದೂರು ನೀಡಿದರು ಕ್ಯಾರೇ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಗಿಡ ನೆಡುವ ವಿಚಾರದಲ್ಲಿ ನಿಂದಿಸಿದ್ದು ಸಭೆಯಲ್ಲಿ ಗ್ರಾಮಸ್ಥ ಶಾಹುಲ್ ಹಮೀದ್ ಪ್ರಶ್ನಿಸಿ ಪಂಚಾಯತ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವ ವ್ಯಕ್ತಿಯ ವಿರುದ್ಧ ಖಂಡನೆ ವ್ಯಕ್ತಪಡಿಸಬೇಕು ಎಂದು ಹೇಳಿದಾಗ ಇದಕ್ಕೆ ಸಹಮತ ವ್ಯಕ್ತಪಡಿಸಿದ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್ ಧ್ವನಿಗೂಡಿಸಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.
ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ಪೂರ್ಣ ಪ್ರಮಾಣದ ವೈದ್ಯರು ಬೇಕು, ಪೊಲೀಸರು ದ್ವಿಚಕ್ರ ವಾಹನಗಳಿಗೆ ಮಾತ್ರ ದಂಡ ವಿಧಿಸುತ್ತಿದ್ದು ಸಂಚಾರ ಉಲ್ಲಂಘಿಸುತ್ತಿರುವ ಬಸ್ಸು ಕಾರು ಲಾರಿ ಚಾಲಕರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ಭಾಗ್ಯಲಕ್ಷ್ಮಿ ಯೋಜನೆಯ ಸ್ಕಾಲರ್ ಶಿಪ್ ಸ್ಥಗಿತಗೊಂಡಿದೆ, ಪಕ್ಷಿಕೆರೆ ಪಂಜ ಬಳಿ ಪಂಚಾಯತ್ ಗಡಿ ವಿವಾದದಿಂದ ರಸ್ತೆ ಹೊಂಡಮಯವಾಗಿ ಅವ್ಯವಸ್ಥೆಗಳ ಆಗರವಾಗಿದೆ, ಕಜಕ್ ತೋಟ ಬಳಿ ನೂತನ ರಸ್ತೆ ನಿರ್ಮಾಣ ಯಾವಾಗ?, ಕೆರೆಕಾಡು ಸರಕಾರಿ ಶಾಲೆ ದುರಸ್ತಿ ಪಡಿಸಿ , ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಾಜೀ ಅಧ್ಯಕ್ಷೆ ಸುಮತಿ ರವರ ಮನೆ ಬಾವಿ ನೀರು ಮಲಿನಗೊಂಡು ಕೃತಕ ನೆರೆ ಉಂಟಾಗಿದೆ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿ ಬಂದವು.
ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಉಪಸ್ಥಿತರಿದ್ದು ಗ್ರಾಮ ಸಭೆಯನ್ನು ನಡೆಸಿಕೊಟ್ಟರು.
Kshetra Samachara
21/07/2022 03:42 pm