ಮುಲ್ಕಿ: ಯುವ ವಾಹಿನಿ (ರಿ) ಮುಲ್ಕಿ ಘಟಕದ 20ನೇ ವರ್ಷದ"ಆಟಿಡೊಂಜಿ ದಿನ" ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾತೃಶ್ರೀ ಹೈವೇ ಸ್ಟಾರ್ ಪೆಟ್ರೋಲ್ ಪಂಪ್ ನ ಮಾಲಕರಾದ ಜನಾರ್ಧನ ಪೂಜಾರಿ ಹಲಸಿನಹಣ್ಣು ತುಂಡು ಮಾಡುವ ಮೂಲಕ ಉದ್ಘಾಟಿಸಿದರು.
ಆಟಿಯ ಮಹತ್ವದ ಬಗ್ಗೆ ದೈವ ನರ್ತಕ ಹಾಗೂ ಸಿವಿಲ್ ಇಂಜಿನಿಯರ್ ಡಾ. ರವೀಶ್ ಪರವ ಪಡುಮಲೆ ಉಪನ್ಯಾಸ ನೀಡಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹಿಂದಿನ ಕಾಲದ ಸಂಸ್ಕೃತಿಗಳು ದೂರವಾಗುತ್ತಿದ್ದು ಜೀವನ ಕಷ್ಟಕರವಾಗುತ್ತಿದೆ, ಸುಸಂಸ್ಕೃತ ಸಮಾಜ ಕಟ್ಟುವುದೇ ನಮ್ಮ ಧ್ಯೇಯವಾಗಲಿ, ಹಿಂದಿನ ಕಾಲದ ಆಟಿಯ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು "ಆಟಿಡೊಂಜಿ ದಿನ" ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಯುವ ವಾಹಿನಿ ಮುಲ್ಕಿ ಘಟಕದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿ ಮುಲ್ಕಿ ಘಟಕದ ಅಧ್ಯಕ್ಷೆ ಭಾರತಿ ಭಾಸ್ಕರ್ ಕೋಟ್ಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಉದಯ ಅಮೀನ್ ಮಟ್ಟು,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಕನ್ನಂಗಾರ್ ಬ್ರಹ್ಮ ಬೈದರ್ಕಳ ಗರಡಿ ಯ ಗುರಿಕಾರ ಶೀನ ಪೂಜಾರಿ ಹೆಜಮಾಡಿ, ಯುವ ವಾಹಿನಿಯ ಪದಾಧಿಕಾರಿಗಳಾದ ಯೋಗೀಶ್ ಕೋಟ್ಯಾನ್, ಜಾಹ್ನವಿ ಮೋಹನ್ ಸುವರ್ಣ, ಸತೀಶ್ ಸಾಲ್ಯಾನ್, ಲತೀಶ್ ಕಾರ್ನಾಡ್,ಮಾಜೀ ಅಧ್ಯಕ್ಷ ಭರತೇಶ ಅಮೀನ್, ಸತೀಶ್ ಕಿಲ್ಪಾಡಿ,ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ "ಆಟಿದ ತಮ್ಮನ" ನೆಲೆಯಲ್ಲಿ ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ)ದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರನ್ನು ಸನ್ಮಾನಿಸಲಾಯಿತು. ಬಂದ ಅತಿಥಿಗಳಿಗೆ ಅರೆಪುದಡ್ಡೆ,ಹಪ್ಪಳ ಮಧ್ಯಾಹ್ನ ಆಟಿಯ ತಿನಿಸುಗಳಾದ ಕುಕ್ಕುದ ಉಪ್ಪಡ್, ತಿಮರೆ ಚಟ್ನಿ, ಉಪ್ಪಡ್ ಪಚ್ಚಿರ್, ಕುಡುತ್ತ ಚಟ್ನಿ, ಕುಕ್ಕುದ ಚಟ್ನಿ, ತೊಜಂಕ್ ನುರ್ಗೆ ಸೊಪ್ಪು, ತೇವು ತೇಟ್ಲ, ಉರ್ಪೆಲ್ ನುಪ್ಪು, ಕುಡುತ್ತ ಸಾರ್, ತೇವು ಪದಿಪೆ, ಪೆಲಕಾಯಿದ ಗಟ್ಟಿ, ಮೆತ್ತೆದ ಗಂಜಿ ಅತಿಥಿ ಸತ್ಕಾರದಲ್ಲಿ ಗಮನ ಸೆಳೆಯಿತು
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮುಲ್ಕಿ ಯುವವಾಹಿನಿ ಕಲಾವಿದರಿಂದ ಆಟಿದ ನಲಿಕೆ, ತೆಲಿಕೆ, ಪದರಂಗಿತ ಕುಸಲ್ದ ಗೊಂಚಿಲ್ ಕಾರ್ಯಕ್ರಮ ನಡೆಯಿತು.
Kshetra Samachara
17/07/2022 12:25 pm