ಮುಲ್ಕಿ:ಕೇರಳ ರಾಜ್ಯದಲ್ಲಿ ಸಾಕ್ಷರತೆಯನ್ನು ಹುಟ್ಟು ಹಾಕಿದ, ಜಾತಿ ವೈಷಮ್ಯದ ಕಿಚ್ಚಿನಿಂದ ಉರಿಯುತ್ತಿದ್ದ ಸಮಾಜದ ಜನರನ್ನು ಬದುಕಿಸಿದ, ಸಮಾಜದಲ್ಲಿ ಶಾಂತಿಯುತವಾಗಿ ಕ್ರಾಂತಿಕಾರಿ ಬದಲಾವಣೆಯನ್ನು ತಂದು ಸಮಾಜ ಸುಧಾರಣೆ ಮಾಡಿದ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಭೋಧನೆಯನ್ನು, ತತ್ವ ಸಂದೇಶವನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಗುರುಗಳ ಅರಿವನ್ನು ವಿದ್ಯಾರ್ಥಿಗಳಲ್ಲಿ ಹುಟ್ಟು ಹಾಕುವ ನೆಲೆಯಲ್ಲಿ ಸರಕಾರ ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಅಳವಡಿಸಿರುವುದು ಅಭಿನಂದನೀಯ ಕೆಲಸ.
ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂಧಿಸುತ್ತೇವೆ. ಆದರೆ ದುರಂತ ಎಂದರೆ ಈ ವರುಷ ರಾಜ್ಯ ಸರಕಾರದಿಂದ ನೇಮಕಗೊಂಡಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಈ ಬಾರಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಿಂದ ಉದ್ದೇಶಪೂರ್ವಕವಾಗಿ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಒಬ್ಬ ದಾರ್ಶನಿಕರ ವಿಚಾರದಾರೆಯನ್ನು ವಿದ್ಯಾರ್ಥಿಗಳು ಕಲಿಯದಂತೆ ತಡೆಯುವುದು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಪೂರ್ವಗ್ರಹಪೀಡಿತ ಕ್ರಮವಾಗಿದೆ.
ಇದನ್ನು ಯುವವಾಹಿನಿ ಸಂಸ್ಥೆಯ ಸರ್ವ ಸದಸ್ಯರೂ ಖಂಡಿಸುತ್ತೇವೆ. ಇದು ಗುರುಗಳ ಭಕ್ತರ ಭಾವನೆಯನ್ನು ಘಾಸಿಗೊಳಿಸಿದೆ. ಈ ಬಗ್ಗೆ ಬೇರೆ ಬೇರೆ ಸಂಘಟನೆಗಳು ಸರಕಾರದ ಗಮನ ಸೆಳೆದಿದ್ದು, ಇದಕ್ಕೆ ಸ್ಪಂದಿಸಿ ಸರಕಾರ ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಗುರುಗಳ ಪಠ್ಯವನ್ನು ಸೇರಿಸಿದೆ.
ಆದರೆ ಇದು ಸರಿಯಲ್ಲ ಕರ್ನಾಟಕ ರಾಜ್ಯದಲ್ಲಿಯೇ ಪರಿವರ್ತನೆಗೆ ನಾಂದಿ ಹಾಡಿರುವ ಗುರುಗಳ ಬಗ್ಗೆ ಈ ಹಿಂದಿನಂತೆಯೇ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿಯೇ ಗುರುಗಳ ಪಠ್ಯವನ್ನು ಸೇರಿಸುವಲ್ಲಿ ಸರಕಾರ ಮುತುವರ್ಜಿ ವಹಿಸಬೇಕು,
ಸಮಾಜ ಸುಧಾರಕರ ಪಠ್ಯವನ್ನು ತೆಗೆದು ಹಾಕಿ ತಮ್ಮ ತಮ್ಮ ಅಲ್ಪ ಬುದ್ಧಿಯನ್ನು ತೋರಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಸದಸ್ಯರನ್ನು ಕಪ್ಪು ಪಟ್ಟಿಗೆ ಸೇರಿಸಿ ಶಾಶ್ವತವಾಗಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಹೊರಗಿಡಬೇಕು. ಈ ಮೂಲಕ ರಾಜ್ಯದ ಸಮಸ್ತ ನಾರಾಯಣ ಗುರುಗಳ ಭಕ್ತರ ನೋವಿಗೆ ಸರಕಾರ ಸ್ಪಂದಿಸಬೇಕು ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿ ಸರಕಾರವನ್ನು ಒತ್ತಾಯಿಸಿದೆ.
Kshetra Samachara
09/07/2022 12:34 pm