ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ:ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸರಕಾರದ ಆದ್ಯತೆ

ಸುಳ್ಯ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಲಾಗುತಿದೆ. ರಸ್ತೆಗಳ ಅಭಿವೃದ್ಧಿಯ ಸಂದರ್ಭದಲ್ಲಿ ಜನರ ಸಹಕಾರ ಮತ್ತು ಸಹಭಾಗಿತ್ವ ಅತೀ ಅಗತ್ಯ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ಸೇವಾಜೆ-ಮಡಪ್ಪಾಡಿ ರಸ್ತೆ ಹಾಗು ಎಲಿಮಲೆ-ಅರಂತೋಡು ರಸ್ತೆಯಲ್ಲಿ ಸೇವಾಜೆ ಎಂಬಲ್ಲಿ ನಿರ್ಮಾಣಗೊಂಡ ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿಯ ಮೂಲಕ ಜನರ ವಿಶ್ವಾಸ ಗಳಿಸುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 75 ಗ್ರಾಮಗಳಿಗೂ ಅಭಿವೃದ್ಧಿಯ ಬೆಳಕನ್ನು ಹರಿಸುವ ಗುರಿ ಹೊಂದಲಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೆ 50 ಕೋಟಿ ಅನುದಾನ ಬಿಡುಗಡೆಯಾಗಿದೆ.ಜನರು ನೀಡಿದ ಅಧಿಕಾರಕ್ಕೆ ಮತ್ತು ತಮ್ಮ ಮೇಲಿರಿಸಿದ ವಿಶ್ವಾಸಕ್ಕೆ ಚ್ಯುತಿ ಬಾರದಂತೆ‌ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ ಸಚಿವರು ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿದರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತರ ಸಂಘವು ನಡೆಸಿದ ಗ್ರಾಮ ವಾಸ್ತವ್ಯದ ಕಲ್ಪನೆಗೆ ಎಲ್ಲರೂ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಕಾರವೇ ಈಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಲ್ಪನೆಯ ಮೂಲಕ ಗ್ರಾಮ ವಾಸ್ತವ್ಯ ಮಾಡುವುದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚು ಅರ್ಥ ಬರುವಂತೆ ಮಾಡಿದೆ ಎಂದು ಹೇಳಿದರು.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಯತ್ನ ಮತ್ತು ಗ್ರಾಮ ವಾಸ್ತವ್ಯದ ಫಲವಾಗಿ ಸರಕಾರ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಜ.11ರಂದು ಶಂಕುಸ್ಥಾಪನೆ ನೆರವೇರಿ ಕಾಮಗಾರಿ ಆರಂಭಗೊಂಡಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು.ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.ಕೂಡಲೇ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 2 ಕೋಟಿ ಅನುದಾನ ಘೋಷಣೆ ಮಾಡಿದ್ದರು.

ಅದರಲ್ಲಿ 1.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ತಿಯಾಗಿದೆ. ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ. ಅಭಿವೃದ್ಧಿಯಾಗಿತ್ತು. ಉಳಿದ 3.7 ಕಿ.ಮಿ. ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿತ್ತು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಕಾಮಗಾರಿ ಅನುಷ್ಠಾನ ಮಾಡಿದೆ. ರಸ್ತೆಯ 3.75 ಕಿ.ಮಿ. ಅಭಿವೃದ್ಧಿಯಾಗಿದೆ. 3.75 ಮೀಟರ್ ಅಗಲದಲ್ಲಿ ಅಭಿವೃದ್ಧಿಯಾಗಿದ್ದು 150 ಮೀಟರ್ ಕಾಂಕ್ರೀಟೀಕರಣ ಮತ್ತು 3.6 ಕಿ.ಮಿ. ಡಾಮರೀಕರಣ ನಡೆದಿದೆ.3 ಮೋರಿಗಳು ನಿರ್ಮಾಣವಾಗಿದೆ.

ಎಲಿಮಲೆ-ಅರಂತೋಡು ರಸ್ತೆಯಲ್ಲಿ ಸೇವಾಜೆ ಎಂಬಲ್ಲಿ 5054 ಯೋಜನೆಯಲ್ಲಿ 2.50 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನೂತನ ಸೇತುವೆ ನಿರ್ಮಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

26/06/2022 09:11 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ