ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2022 23 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಹಳೆಯಂಗಡಿ ರಾಮಾನುಗ್ರಹ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಹಿಂದಿನ ನಡವಳಿಗಳನ್ನು ಓದುತ್ತಿದ್ದಂತೆ ಆಕ್ಷೇಪವೆತ್ತಿ ಗ್ರಾಮಸ್ಥ ಮಹಾಬಲ ಮಾತನಾಡಿ ಕಳೆದ ಮೂರು ವರ್ಷಗಳಿಂದ ಗ್ರಾಮ ಸಭೆ ಯಾಕೆ ನಡೆದಿಲ್ಲ? ಕಾಟಾಚಾರಕ್ಕೆ ಗ್ರಾಮ ಸಭೆ ಯಾಕೆ ನಡೆಸಬೇಕು? ಪಂಚಾಯತಿಗೆ ಒಂದು ಕೋಟಿ ಅನುದಾನ ಬಂದಿದ್ದು ಏನು ಮಾಡಿದ್ದೀರಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಪ್ರಶ್ನೆಗೆ ಉತ್ತರಿಸಿ ಸಮಾಧಾನ ಪಡಿಸಲು ಯತ್ನಿಸಿದರು. ಗ್ರಾಮಸಭೆಗೆ ಅನೇಕ ಅಧಿಕಾರಿಗಳು ಗೈರು ಹಾಜರಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಒತ್ತಾಯಿಸಿದರು.
ಕೊಳುವೈಲು ರಸ್ತೆಯ ಪಡುಹಿತ್ಲು ರಸ್ತೆ ತಿರುವು ಬಳಿ ಕೆರೆಗೆ ಅಳವಡಿಸಿದ ತಾತ್ಕಾಲಿಕ ಬಟ್ಟೆಯ ತಡೆಬೇಲಿ ಕುಸಿದು ಹೋಗಿದ್ದು ಶಾಶ್ವತ ತಡೆಗೋಡೆ ಅಗತ್ಯವಿದೆ ಎಂದು ಪಂ. ಸದಸ್ಯ ಸತೀಶ್ ಕೋಟ್ಯಾನ್ ಆಗ್ರಹಿಸಿದರು.
ಹಳೆಯಂಗಡಿ ಮೆಸ್ಕಾಂ ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕದಿಕೆ ಬಳಿ ಟ್ರಾನ್ಸ್ಫಾರ್ಮರ್ ಅಪಾಯದಲ್ಲಿದೆ, ಬಿಲ್ಲು ಕಟ್ಟದಿದ್ದರೆ ಮೆಸೇಜ್ ಬರುತ್ತದೆ, ಕಟ್ಟಿದರೆ ಯಾವುದೇ ಉತ್ತರ ಬರುತ್ತಿಲ್ಲ, ಮೆಸ್ಕಾಂ ಹೆಸರು ತೆಗೆದು "ಪುಸ್ಕಾಂ"ಮಾಡಿ ಎಂದು ಗ್ರಾಮಸ್ಥರೊಬ್ಬರು ಲೇವಡಿ ಮಾಡಿದರು.
ಹಳೆಯಂಗಡಿ ಬೊಳ್ಳೂರು ಶಾಲೆಯ ಬಳಿ ಭಾರೀ ಮಳೆ ಬಂದರೆ ಕೃತಕ ನೆರೆ ಉಂಟಾಗುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರೊಬ್ಬರು ಆಗ್ರಹಿಸಿದರು, ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಚತುಷ್ಪಥ ರಸ್ತೆ ಕಾಮಗಾರಿ ಆವ್ಯವಸ್ಥೆಯಿಂದ ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಕೆಸರುಮಯವಾಗಿದ್ದು ಸಂಚಾರ ದುಸ್ತರವಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪಂಚಾಯತ್ ಅಧ್ಯಕ್ಷ ಪೂರ್ಣಿಮಾ ಮಾತನಾಡಿ ಅನೇಕ ಬಾರಿ ಹೆದ್ದಾರಿ ಕಾಮಗಾರಿ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದರು.
ಸಭೆಯ ನೋಡಲ್ ಅಧಿಕಾರಿಯಾಗಿ ಸಿಡಿಪಿಒ ಮಂಜುಳ, ಪಂಚಾಯತ್ ಉಪಾಧ್ಯಕ್ಷ ಅಶೋಕ್ ಬಂಗೇರ, ಪಿಡಿ ಒ ಮುತ್ತಪ್ಪ , ಕಾರ್ಯದರ್ಶಿ ಕೇಶವ, ಪಂಚಾಯತ್ ಸದಸ್ಯರು ವಿವಿಧ ಇಲಾಖೆಯ ಕೆಲ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
21/06/2022 02:57 pm