ಮೂಡುಬಿದಿರೆ: ರಾಜ್ಯದ ಮುಖ್ಯಮಂತ್ರಿ ಏಪ್ರಿಲ್ 27ರಂದು ಮೂಡುಬಿದಿರೆಗೆ ಆಗಮಿಸಲಿದ್ದು ಮೂಡುಬಿದಿರೆ ತಾಲೂಕು ಆಡಳಿತ ಸೌಧ ಕಟ್ಟಡದ ಉದ್ಘಾಟನೆ ಮತ್ತು ಮುಲ್ಕಿ ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಯ ಶಂಕುಸ್ಥಾಪನೆ ಅಪರಾಹ್ನ 3ಗಂಟೆಗೆ ನಡೆಯಲಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರುಷಗಳಲ್ಲಿ ನೂರುಕೋಟಿಗೂ ಮಿಕ್ಕಿದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರವ್ಯಾಪ್ತಿಯಲ್ಲಿ ನಡೆಸಲಾಗಿದ್ದು, ಕೇಂದ್ರ ಸರಕಾರದ ನಾನ್ನೂರು ಕೋಟಿಗೂ ಮಿಕ್ಕಿದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.
ಒಟ್ಟು 374.71ಕೋಟಿ ಮೊತ್ತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದು, ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಉದ್ಘಾಟನೆ, ದರೆಗುಡ್ಡೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡದ ಉದ್ಘಾಟನೆ, ಬನ್ನಡ್ಕದಲ್ಲಿ ನಿರ್ಮಾಣವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜಿನ ಉದ್ಘಾಟನೆ, ಮುಲ್ಕಿ ಸಮುದಾಯ ಆರೋಗ್ಯಕೇಂದ್ರದ ಹೊರರೋಗಿ ವಿಭಾಗದ ಉದ್ಘಾಟನೆ,ಲೋಕೋಪಯೋಗಿ ಇಲಾಖೆಯಡಿ ವಿದ್ಯಾಗಿರಿಯಿಂದ ಸ್ವರಾಜ್ಯ ಮೈದಾನದವರೆಗೆ ದ್ವಿಪಥ ಹಾಗೂ ರೋಟರಿ ಶಾಲೆ ಬಳಿಯಿಂದ ಮೆಸ್ಕಾಂ ಜಂಕ್ಷನ್ ವರೆಗೆ ಚತುಷ್ಪಥ ರಸ್ತೆಯ ಉದ್ಘಾಟನೆ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಪ್ಪಾಡಿ ಮತ್ತು ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಂಗಡಿ ಬಳಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುಗಳ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ನೂತನ ಕಟ್ಟಡದ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡುವರು.
145.48 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 100.5 ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ -ಇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ, 73.23ಕೋಟಿ ವೆಚ್ಚದ ಸಣ್ಣ ನೀರಾವರಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, 31ಕೋಟಿ ವೆಚ್ಚದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ,10ಕೋಟಿವೆಚ್ಚದ ಮುಲ್ಕಿ ತಾಲೂಕಿನ ಆಡಳಿತ ಸೌಧದ ಕಾಮಗಾರಿಗೆ ಶಿಲಾನ್ಯಾಸ,6ಕೋಟಿ ವೆಚ್ಚದ ನೂತನ ಅಂಬೇಡ್ಕರ್ ಭವನದ ಶಿಲಾನ್ಯಾಸ, 2ಕೋಟಿ ವೆಚ್ಚದಲ್ಲಿ ಮುಜರಾಯಿ ಇಲಾಖೆಯಡಿ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ , 0.50ಕೋಟಿ ವೆಚ್ಚದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಶಿಲಾನ್ಯಾಸವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ ಕುಮಾರ್, ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲು, ಮೀನುಗಾರಿಕಾ ಸಚಿವ ಅಂಗಾರ ಎಸ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕಂದಾಯ ಸಚಿವ ಆರ್.ಅಶೋಕ್, ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ ನಾರಾಯಣ ಸಿ ಎನ್, ಆರೋಗ್ಯ ಸಚಿವ ಡಾ|ಕೆ.ಸುಧಾಕರ್, ಪ್ರಾಥಮಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಬಿಜೆಪಿ ಪ್ರಮುಖರಾದ ಗೋಪಾಲ್ ಶೆಟ್ಟಿಗಾರ್, ಲಕ್ಷ್ಮಣ್ ಪೂಜಾರಿ, ಕೇಶವ ಕರ್ಕೇರ ಉಪಸ್ಥಿತರಿದ್ದರು.
Kshetra Samachara
24/04/2022 12:22 pm