ಮೂಡುಬಿದಿರೆ: ಜಗತ್ತಿನ ಅಭಿವೃದ್ಧಿಯಲ್ಲಿ ಮಹಿಳೆ ಪುರುಷನಷ್ಟೇ ಸರಿ ಸಮಾನಳು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ವಿಮೆನ್ ಡೆವಲಪ್ಮೆಂಟ್ ಸೆಲ್ ವತಿಯಿಂದ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. `
ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರವಾದದ್ದು. ಸಂಸಾರವನ್ನು ಸರಿಯಾಗಿ ಮುನ್ನಡೆಸುವುದರ ಜೊತೆಗೆ ಅನೇಕ ಸಾಧನೆಗಳನ್ನು ಮಾಡುತ್ತಿರುವ ಮಹಿಳೆಯರು ಎಲ್ಲರಿಗೂ ಆದರ್ಶ. ಜೀವನದಲ್ಲಿ ಗಂಡು ಹೆಣ್ಣಿನ ಒಳಗೊಳ್ಳುವಿಕೆಯಿದ್ದಾಗ ಮಾತ್ರ ಯಾವುದೇ ಕಾರ್ಯ ಪರಿಪೂರ್ಣವಾಗುತ್ತದೆ. ಈ ಮೂಲಕ ಸಮಾನತೆಯ ಭಾವದಿಂದ ಅರ್ಥಪೂರ್ಣವಾದ ಬದುಕನ್ನು ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಾದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಮಮತಾ ಬಲ್ಲಾಳ್, ನಿಟ್ಟೆಯ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ಇಲ್ಲಿನ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಸಂಶೋಧನಾ ವಿಭಾಗದ ಸಂಯೋಜಕಿ ಡಾ. ಎ ವೀಣಾ ಶೆಟ್ಟಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೈಕ್ರೋಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಬೀನಾ ಆಂಟನಿ, ಎನಪೋಯ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಪಿ. ಡಿ, ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಸಂಸ್ಥೆಯ ವತಿಯಿಂದ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು ಜತೆಗೆ ಮಹಿಳಾ ನಿಯತಕಾಲಿಕೆ `ಅಥೆನಾ’ದ ಮುಖಪುಟವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಸಂಶೋಧನಾ ಸಂಯೋಜಕ ಡಾ. ರಿಚರ್ಡ್ ಪಿಂಟೋ, ಹಾಗೂ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ `ನಿರಾಮಯ’ದ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ ಉಪಸ್ಥಿತರಿದ್ದರು. ವಿಮೆನ್ ಡೆವೆಲಪ್ಮೆಂಟ್ ಸೆಲ್ ಸಂಯೋಜಕಿ ಶಾಝಿಯಾ ಖಾನುಮ್ ಸ್ವಾಗತಿಸಿದರು, ವಿದ್ಯಾರ್ಥಿನಿ ಸಮನ್ ಸೈಯದ್ ಕಾರ್ಯಕ್ರಮ ನಿರೂಪಿಸಿ, ಅಫ್ರಾ ವಂದಿಸಿದರು.
Kshetra Samachara
18/03/2022 09:09 pm