ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಹೋಬಳಿ: 7ರಲ್ಲಿ 5 ಬಿಜೆಪಿ ಬೆಂಬಲಿತರ ಪಾಲು; ಹಳೆಯಂಗಡಿ ಸಮಬಲ, ಕೆಮ್ರಾಲ್ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ

ಮುಲ್ಕಿ: ಮುಲ್ಕಿ ಹೋಬಳಿಯ 7 ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ 5 ರಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದು, ಉಳಿದಂತೆ ಹಳೆಯಂಗಡಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸಮಬಲದ ಹೋರಾಟ, ಹಾಗೂ ಕೆಮ್ರಾಲ್ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ.

ಮುಲ್ಕಿ ಹೋಬಳಿಯ ಅತಿಕಾರಿಬೆಟ್ಟು,ಬಳ್ಕುಂಜೆ, ಕಿಲ್ಪಾಡಿ, ಐಕಳ, ಪಡುಪಣಂಬೂರು ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಜಯ ಗಳಿಸಿದ್ದಾರೆ. ಉಳಿದಂತೆ ಕೆಮ್ರಾಲ್ ಪಂಚಾಯಿತಿನಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದು, ಹಳೆಯಂಗಡಿ ಪಂಚಾಯಿತಿಯಲ್ಲಿ ಬಿಜೆಪಿ- ಕಾಂಗ್ರೆಸ್ ಬೆಂಬಲಿತರ ನಡು ವಿನ ಹೋರಾಟ ಸಮ ಬಲ ಕಂಡಿದೆ.

* ಮುಲ್ಕಿ ಹೋಬಳಿ ಫಲಿತಾಂಶ: ಅತಿಕಾರಿಬೆಟ್ಟು ಗ್ರಾಪಂ:10 ಸ್ಥಾನಗಳು- ಬಿಜೆಪಿ ಬೆಂಬಲಿತ 9 ಸದಸ್ಯರು. ಕಾಂಗ್ರೆಸ್ ಬೆಂಬಲಿತ ಸದಸ್ಯರು 1.

* ಕಿಲ್ಪಾಡಿ ಗ್ರಾಪಂ: 9 ಸ್ಥಾನಗಳು- ಬಿಜೆಪಿ ಬೆಂಬಲಿತ- 6 ಸದಸ್ಯರು, ಕಾಂಗ್ರೆಸ್ ಬೆಂಬಲಿತ ಸದಸ್ಯರು 3.

* ಪಡುಪಣಂಬೂರು ಗ್ರಾಪಂ: 16 ಸ್ಥಾನಗಳು -ಬಿಜೆಪಿ ಬೆಂಬಲಿತ,15, ಕಾಂಗ್ರೆಸ್ ಬೆಂಬಲಿತ 1 ಸದಸ್ಯರು.

* ಹಳೆಯಂಗಡಿ ಗ್ರಾಪಂ: 22 ಸ್ಥಾನಗಳು, ಕಾಂಗ್ರೆಸ್-11 ಬೆಂಬಲಿತರು, ಬಿಜೆಪಿ ಬೆಂಬಲಿತರು-11.

* ಬಳ್ಕುಂಜೆ ಗ್ರಾಪಂ: 12- ಬಿಜೆಪಿ ಬೆಂಬಲಿತರು-8, ಕಾಂಗ್ರೆಸ್ ಬೆಂಬಲಿತರು-4.

* ಕೆಮ್ರಾಲ್ ಗ್ರಾಪಂ: 17 ಸ್ಥಾನಗಳು- ಕಾಂಗ್ರೆಸ್ ಬೆಂಬಲಿತರು10, ಬಿಜೆಪಿ ಬೆಂಬಲಿತರು7.

* ಐಕಳ ಗ್ರಾಪಂ: 14 ಸ್ಥಾನಗಳು- ಬಿಜೆಪಿ ಬೆಂಬಲಿತರು-14, ಕಾಂಗ್ರೆಸ್ ಬೆಂಬಲಿತರು-0.

ಪ್ರತಿಷ್ಠಿತ ಅತಿಕಾರಿಬೆಟ್ಟು ಗ್ರಾಪಂ. ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಐಕಳ ಗ್ರಾಪಂನಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ನೆಲಕಚ್ಚಿದೆ. ಹಾಗೆಯೇ ಕಾಂಗ್ರೆಸ್ ಬೆಂಬಲಿತರ ಅಧಿಕಾರವಿದ್ದ ಹಳೆಯಂಗಡಿ ಗ್ರಾಪಂನಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದ ಹೋರಾಟ ನಡೆಸುತ್ತಿದೆ. ಕೆಮ್ರಾಲ್ ಗ್ರಾಪಂನಲ್ಲಿ ಆಡಳಿತದಲ್ಲಿದ್ದ ಬಿಜೆಪಿಯ ಅಧಿಕಾರ ವಿರೋಧಿ ಅಲೆ ಕಾಂಗ್ರೆಸ್ ಬೆಂಬಲಿತರನ್ನು ಅಧಿಕಾರಕ್ಕೇರುವಂತೆ ಮಾಡಿದೆ. ಈ ನಡುವೆ ಕೆಮ್ರಾಲ್ ಗ್ರಾಪಂನಲ್ಲಿ ಕೇವಲ ಒಂದು ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಸ್ಥಾನಕ್ಕೆ ಮರು ಎಣಿಕೆ ನಡೆಯುತ್ತಿದೆ.

ಗೆದ್ದ ಪ್ರಮುಖರಲ್ಲಿ ಪಡುಪಣಂಬೂರು ಪಂಚಾಯತ್ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು,ಮಾಜಿ ಸದಸ್ಯ ಹೇಮನಾಥ ಅಮೀನ್ ತೋಕೂರು,ಪದ್ಮಿನಿ ಶೆಟ್ಟಿ ಶಿಮಂತೂರು,ದಯಾನಂದ ಕೋಟ್ಯಾನ್ ಮಟ್ಟು, ಮನೋಹರ ಕೋಟ್ಯಾನ್ ಕೊಲಕಾಡಿ, ಬಳ್ಕುಂಜೆ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್, ಐಕಳ ಗ್ರಾಪಂ ಮಾಜಿ ಅಧ್ಯಕ್ಷ ದಿವಾಕರ ಚೌಟ, ಹಳೆಯಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ಜಲಜಾ,ಮಾಜಿ ಸದಸ್ಯ ಅಬ್ದುಲ್ ಅಜೀಜ್,ಗೋಪಿನಾಥ್ ಪಡಂಗ, ಕೃಷ್ಣ ಶೆಟ್ಟಿಗಾರ್ ಅಂಗರಗುಡ್ಡೆ, ಅನಿಲ್ ಸಸಿಹಿತ್ಲು, ಚಂದ್ರಕುಮಾರ್ ಸಸಿಹಿತ್ಲು, ಧನರಾಜ್ ಸಸಿಹಿತ್ಲು, ಮಯ್ಯದ್ದಿ ಪಕ್ಷಿಕೆರೆ,ಅಬ್ದುಲ್ ಖಾದರ್ ಹಳೆಯಂಗಡಿ ಸೇರಿದ್ದಾರೆ.

ಸೋತ ಪ್ರಮುಖರಲ್ಲಿ ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ಶಾರದಾ ವಸಂತ್, ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಕಿಲ್ಪಾಡಿ ಪಂ. ಮಾಜಿ ಅಧ್ಯಕ್ಷ ಶ್ರೀಕಾಂತ್ ಕೆರೆಕಾಡು,ಮಾಜಿ ಸದಸ್ಯ ನಾಗರಾಜ್, ಮನೋಜ್ ಹಳೆಯಂಗಡಿ, ಮೋಹನ್ ಕುಬೆವೂರು ಮತ್ತಿತರರು ಸೇರಿದ್ದಾರೆ.

ವಿಶೇಷವೆಂದರೆ ಅತಿಕಾರಿಬೆಟ್ಟು ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯ ಮನೋಹರ ಕೋಟ್ಯಾನ್ ಇತ್ತೀಚೆಗೆ ಬಿಜೆಪಿ ಸೇರಿದ್ದು, ಚುನಾವಣೆಯಲ್ಲಿ ಜಯ ಗಳಿಸಿ ಕಾಂಗ್ರೆಸ್ಸನ್ನು ಸೋಲಿಸಿ ತನ್ನ ತಾಕತ್ತು ತೋರಿದ್ದಾರೆ. ಬಿಜೆಪಿ- ಕಾಂಗ್ರೆಸ್ಸಿನ ಜಿದ್ದಾಜಿದ್ದಿನ ಕಣವಾದ ಹಳೆಯಂಗಡಿ ಗ್ರಾ ಪಂನಲ್ಲಿ ಎಸ್ಡಿಪಿಐ ಸ್ಪರ್ಧೆಯಿಂದ ಕಾಂಗ್ರೆಸ್ ಬೆಂಬಲಿತರು ಹಿನ್ನಡೆ ಅನುಭವಿಸಿದ್ದಾರೆ. ಒಟ್ಟಾರೆಯಾಗಿ ಮುಲ್ಕಿ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತರ ಆರ್ಭಟಕ್ಕೆ ಕಾಂಗ್ರೆಸ್ ಕೊಚ್ಚಿಹೋಗಿದೆ. ಚುನಾವಣೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡರೂ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮುಲ್ಕಿ-ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ತಾ.ಪಂ. ಸದಸ್ಯ ಶರತ್ ಕುಬೆವೂರು ನೇತೃತ್ವದಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ಸಿಗೆ ಭಾರಿ ಹೊಡೆತವನ್ನೇ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

31/12/2020 07:19 am

Cinque Terre

8.98 K

Cinque Terre

1

ಸಂಬಂಧಿತ ಸುದ್ದಿ