ಪುತ್ತೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಮುಂತಾದ ರೈತವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರೆ ನೀಡಿರುವ ಸೆ.28ರ ಬಂದ್‌ಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ಇಂದು ಪುತ್ತೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ವಕ್ತಾರರು, ಈ ಮಾರಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಬಂದ್‌ಗೆ ಬೆಂಬಲ ನೀಡುವುದಾಗಿ ತಿಳಿಸಿವೆ.
ಜನವಿರೋಧಿ ಮಸೂದೆಯನ್ನು ರೈತರ ಪರ ಎಂದು ಬಿಂಬಿಸಲು ಸರಕಾರ ಹೆಣಗಾಡುತ್ತಿದೆ ಎಂದು ಅಭಿಪ್ರಾಯಿಸಿರುವ ಮುಖಂಡರು, ಎಲ್ಲಾ ವಿರೋಧದ ನಡುವೆಯೂ ಮಸೂದೆ ಅಸಂವಿಧಾನಿಕವಾಗಿ ಜಾರಿಯಾದರೆ, ಇದರ ದೂರಗಾಮಿ ಪರಿಣಾಮ ಬಹಳ ಅಪಾಯಕಾರಿ ಎಂದು ತಿಳಿಸಿದೆ.
ಕೃಷಿ ಭೂಮಿಗಳ ಒಡೆತನ ಕಾರ್ಪೊರೇಟ್‌ಗಳ ಕೈಗೆ ದೊರೆತರೆ, ದೇಶ ಸ್ವಾವಲಂಬನೆ ಕಳೆದುಕೊಂಡು ಜನಸಾಮಾನ್ಯರು ಬೃಹತ್ ಕಂಪೆನಿಗಳ ಜೀತದಾಳುಗಳಾಗಿ ಬದುಕಬೇಕಾಗುತ್ತದೆ ಎಂದಿವೆ.
ಆದ್ದರಿಂದ ಸರಕಾರ, ರೈತರ ತಾಳ್ಮೆ ಪರೀಕ್ಷಿಸದೆ ಈ ರೈತ ವಿರೋಧಿ ಮಸೂದೆ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸುವುದಾಗಿ ಮುಖಂಡರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಡಿವೈಎಫ್‌ಐ ಕಾರ್ಯದರ್ಶಿ ಅಡ್ವಕೇಟ್ ತುಳಸೀದಾಸ್, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಸ್ಥಾಪಕ ಜಿಲ್ಲಾಧ್ಯಕ್ಷ ರಾಜು ಹೊಸಮಠ., ಎಫ್‌ಐಟಿಯು ಜಿಲ್ಲಾ ಸಮಿತಿ ಸದಸ್ಯ ಇಸ್ಹಾಕ್ ನೀರ್ಕಜೆ ವಿಟ್ಲ, ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಹಳೆಮನೆ, ಅಂಬೇಡ್ಕರ್ ಸಮಿತಿಯ ಗಿರಿಧರ್, ಪರಮೇಶ್ವರ್ ಕೆಮ್ಮಿಂಜೆ, ಡಿಎಸ್‌ಎಸ್‌ನ ಹೇಮಂತ್ ಆರ್ಲಪದವು ಉಪಸ್ಥಿತರಿದ್ದರು.
Kshetra Samachara
26/09/2020 05:39 pm