ಮುಲ್ಕಿ: ಮುಲ್ಕಿ ನ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದ್ದು ನವೆಂಬರ್ 6ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಮುಲ್ಕಿ ನ.ಪಂ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿ ಸರಕಾರ ಆದೇಶ ಹೊರಡಿಸಿದ್ದು ಸರಕಾರದ ಆದೇಶದಂತೆ ಹಿಂದುಳಿದ ವರ್ಗ ಬಿ ಯಲ್ಲಿ ಮುಲ್ಕಿ ನ.ಪಂ.ಗೆ ನೂತನವಾಗಿ ಆಯ್ಕೆಯಾದ ಸದಸ್ಯರಲ್ಲಿ ಬಿಜೆಪಿ ಸದಸ್ಯರಾದ ಸುಭಾಸ್ ಶೆಟ್ಟಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗ ಬಿ ಅಭ್ಯರ್ಥಿಗಳು ಇಲ್ಲದ ಕಾರಣ ಮುಲ್ಕಿ ನ.ಪಂ. ಅಧ್ಯಕ್ಷ ಸ್ಥಾನ ಬಿಜೆಪಿಗೆ ಸುಲಭವಾಗಿ ದಕ್ಕುವ ಸಾಧ್ಯತೆ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಡಲಿದ್ದು, ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ.
ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು, ಕಾಂಗ್ರೆಸ್ಸಿನಿಂದ ಪುತ್ತುಬಾವ ಹಾಗೂ ಬಿಜೆಪಿಯಿಂದ ಸತೀಶ್ ಅಂಚನ್ ನಡುವೆ ಸ್ಪರ್ಧೆ ಸಾಧ್ಯತೆ ಇದೆ. ಕೆಲವು ತಿಂಗಳ ಹಿಂದೆ ಮುಲ್ಕಿ ನ.ಪಂ. ಗೆ ಚುನಾವಣೆ ನಡೆದಿದ್ದು, 18 ಸ್ಥಾನಗಳಲ್ಲಿ 9 ಸ್ಥಾನ ಕಾಂಗ್ರೆಸ್ ಪಡೆದಿದ್ದರೆ, 8 ಬಿಜೆಪಿ, 1 ಸ್ಥಾನ ಜೆಡಿಎಸ್ ಪಡೆದಿತ್ತು. ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ನಡೆಸಿದ್ದವು. ಆದರೆ, ಮೀಸಲಾತಿ ನಿಯಮ ಹಾಗೂ ಕೊರೊನಾದಿಂದಾಗಿ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೀಗ ಬಿಜೆಪಿ ಸರಕಾರ ನೂತನ ಮೀಸಲಾತಿ ನಿಯಮ ಪ್ರಕಟಿಸಿದ್ದು, ಕಾಂಗ್ರೆಸ್ ಅಧಿಕ 9 ಸ್ಥಾನ ಪಡೆದಿದ್ದರೂ ಅಧ್ಯಕ್ಷರ ಸ್ಥಾನಕ್ಕೆ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದೆ ನಿರಾಶೆ ಮೂಡಿದೆ.
Kshetra Samachara
27/10/2020 11:12 pm