ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಕೆಸರಾಟ ಪಾಠ ಕಾರ್ಯಕ್ರಮವು ಕಾರ್ಕಳ ತಾಲೂಕಿನ ಪರಪ್ಪು ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರ ಗೇರು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಮಣಿರಾಜ ಶೆಟ್ಟಿ, “ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣದ ಭರಾಟೆಯಲ್ಲಿ ಹಿಂದಿನ ಪರಂಪರಾಗತ ಹಾಗೂ ಸಾಂಪ್ರದಾಯಿಕ ಆಟಗಳು ಹಾಗೂ ಆಹಾರ ಪದ್ಧತಿಗಳನ್ನು ಮರೆತ್ತಿದ್ದೇವೆ. ವಿದ್ಯಾಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ” ಎಂದರು.
ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಮಹಮ್ಮದ್ ಸದಾಕತ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೆಸರಾಟ ಪಾಠ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿದರು. ಕಾರ‍್ಯಕ್ರಮದಲ್ಲಿ ಕಾರ್ಕಳದ ಪರಪ್ಪುವಿನ ಉದ್ಯಮಿ ರಾಜೇಶ್ ರಾವ್, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಮಣ ಹಾಗೂ ಇನ್ನಿತರರು ಭಾಗವಹಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಂತೋನಿ ಡಿ’ಸೋಜಾ ಹಾಗೂ ಉದ್ಯಮಿ ಸುಭಾಷ್ ಕಾಮತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭ ಉಪನ್ಯಾಸಕರು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
22/08/2022 10:42 pm