ಬಂಟ್ವಾಳ: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಲಸಿಕೆಯನ್ನು ವೈದ್ಯಾಧಿಕಾರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಗಣೇಶ್ ಅವರು ಮೊದಲ ಲಸಿಕೆಯನ್ನು ಪಡೆದುಕೊಂಡರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಶಾಸಕ ನಾಯ್ಕ್, ದೇಶದಾದ್ಯಂತ ಬೂಸ್ಟರ್ ಡೋಸ್ ಅನ್ನು ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದ್ದು, ಮೂರನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಬೂಸ್ಟರ್ ಡೋಸ್ ಅನ್ನು ಪ್ರಥಮವಾಗಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.
ಬಂಟ್ವಾಳ ತಾಲೂಕಿನಲ್ಲಿ 3400 ಅರ್ಹ ಮುಂಚೂಣಿ ಕಾರ್ಯಕರ್ತರಿದ್ದು, ಅವರೆಲ್ಲರಿಗೂ ಪ್ರಥಮ ಆದ್ಯತೆ ಮೇಲೆ ಹಾಗೂ ಸುಮಾರು 40 ಸಾವಿರದಷ್ಟು ಇರುವ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದರು. ಕೊರೊನಾ ಲಸಿಕಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು, ಬಹುತೇಕ ಮಂದಿ ಮೊದಲ ಮತ್ತು ದ್ವಿತೀಯ ಡೋಸ್ ಲಸಿಕೆಯನ್ನು ಪಡೆದಿದ್ದಾರೆ, ತಾಲೂಕಿನಲ್ಲಿ ಇತ್ತೀಚೆಗೆ ಆರಂಭಗೊಂಡ 15ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾ ಕಾರ್ಯಕ್ರಮವೂ ಶೇ.100 ಸಾಧನೆ ಮಾಡಿದೆ ಎಂದರು.
Kshetra Samachara
10/01/2022 01:25 pm