ಮಂಗಳೂರು: ರೈತ-ಕಾರ್ಮಿಕ-ದಲಿತ-ಮಹಿಳಾ ವಿರೋಧಿ ನೀತಿ ಜಾರಿಗೊಳಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಹಾಗೂ ದೆಹಲಿ ಗಲಭೆ ನೆಪದಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಸರಕಾರದ ಫ್ಯಾಸಿಸ್ಟ್ ಧೋರಣೆ ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಪ್ರತಿ ಹಂತದಲ್ಲೂ ತಪ್ಪುಹೆಜ್ಜೆ ಇಡುತ್ತಾ, ದೇಶದ ಆರ್ಥಿಕತೆ ಸರ್ವನಾಶ ಮಾಡುತ್ತಿದೆ ಎಂದು ದೂರಿದರು.
ರೈತ ವಿರೋಧಿ ಮಸೂದೆ ಜಾರಿಗೊಳಿಸಿ, ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ. ರೈತರ ಪರವಾಗಿ ದೇಶದ್ರೋಹಿ ಮಸೂದೆಗಳ ವಿರುದ್ಧ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದರನ್ನೇ ಅಮಾನತುಗೊಳಿಸುವ ಮೂಲಕ ಫ್ಯಾಸಿಸ್ಟ್ ಮನೋಭಾವ ಪ್ರದರ್ಶಿಸಿದೆ ಎಂದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐಎಂ ಮುಖಂಡರಾದ ಜಯಂತಿ ಬಿ.ಶೆಟ್ಟಿ, ಬಶೀರ್ ಪಂಜಿಮೊಗರು, ನವೀನ್ ಕೊಂಚಾಡಿ, ದಿನೇಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
Kshetra Samachara
22/09/2020 05:23 pm