ಮುಲ್ಕಿ: ಮುಲ್ಕಿ ಸಮೀಪದ ಹಳೆಯಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ನೂತನ ಸುಸಜ್ಜಿತ ಮೀನು ಮಾರುಕಟ್ಟೆಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಹಾಗೂ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಸಹಕಾರದೊಂದಿಗೆ ಹಳೆಯಂಗಡಿಯಲ್ಲಿ 50 ಲಕ್ಷ ರೂ. ವೆಚ್ಚದ ನೂತನ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.
ರಾಜ್ಯ ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಹಾಗೂ ಕೇಂದ್ರದ ಮೋದಿ ನೇತೃತ್ವದ ಸರಕಾರದ ಸಹಕಾರದೊಂದಿಗೆ ರಾಜ್ಯದ ಎಲ್ಲ ಮೀನು ಮಾರುಕಟ್ಟೆ ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಹೈಟೆಕ್ ಮಾರುಕಟ್ಟೆ ಮೂಲಕ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಶುಕ್ರವಾರ ಬೆಳಿಗ್ಗೆ ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಯ ಹಳೆ ಮಾರುಕಟ್ಟೆ ಒಳಗಡೆ ನೂತನ ಮಾರುಕಟ್ಟೆ ಕಾಮಗಾರಿಯ ಭೂಮಿಪೂಜೆಗೆ ಶಾಸಕರು ಸರಿಯಾದ ಸಮಯಕ್ಕೆ ಬಂದಿದ್ದರೂ ಹಳೆಯಂಗಡಿ ಪಂಚಾಯಿತಿಯ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಉಪಸ್ಥಿತರಿಲ್ಲದ ಕಾರಣ ಗರಂ ಆದ ಶಾಸಕರು, ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದು ವಿಫಲವಾಯಿತು. ಇದರಿಂದ ಮತ್ತಷ್ಟು ಕೋಪಗೊಂಡ ಶಾಸಕರು, ಜಿಪಂ ಸದಸ್ಯರ ಮುಖಾಂತರ ಪಂ. ಕಾರ್ಯದರ್ಶಿಯನ್ನು ಸಂಪರ್ಕಿಸಿ ಸ್ಥಳಕ್ಕೆ ಬರಲು ಹೇಳಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪಿಡಿಒ ರಜೆಯಲ್ಲಿದ್ದಾರೆ ಎಂದು ಕಾರ್ಯದರ್ಶಿ ಶ್ರೀಶೈಲ ಸಮಜಾಯಿಷಿ ನೀಡಿದಾಗ, ಶಾಸಕರು ಅಸಮಾಧಾನಗೊಂಡು ಸರಕಾರಿ ಕಾರ್ಯಕ್ರಮಕ್ಕೆ ಪಂಚಾಯಿತಿ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಸೂಚನೆ ನೀಡಿದರು. ಆಗ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಶಾಸಕರಿಗೆ ಪಿಡಿಒ ಕಾರ್ಯವೈಖರಿ ಬಗ್ಗೆ ದೂರು ನೀಡಿದರು.
ಹಳೆಯಂಗಡಿಗೆ ನೂತನ ಪಿಡಿಒ ಪೂರ್ಣಿಮಾ ನೇಮಕವಾದ ಬಳಿಕ ಕಳೆದ ಕೆಲವು ತಿಂಗಳಿನಿಂದ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಶೀತಲ ಸಮರ ನಡೆಯುತ್ತಿದ್ದು, ಈಗ ಮತ್ತಷ್ಟು ತಾರಕಕ್ಕೇರಿದೆ. ಇದು ಎಲ್ಲಿಗೆ ಹೋಗಿ ಕೊನೆಗೊಳ್ಳುತ್ತದೆ ಎಂದು ಕಾದು ನೋಡಬೇಕು ಎನ್ನುತ್ತಾರೆ ಸ್ಥಳೀಯರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ವಿನೋದ್ ಬೊಳ್ಳೂರು, ತಾಪಂ ಸದಸ್ಯ ಜೀವನ ಪ್ರಕಾಶ್ ಕಾಮೆರೊಟ್ಟು, ಮುಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಹಳೆಯಂಗಡಿ ನೂತನ ಪಂಚಾಯಿತಿ ಸದಸ್ಯರಾದ ಚಂದ್ರಿಕಾ, ಅಶೋಕ್, ವಿನೋದ್ ಕುಮಾರ್, ಸವಿತಾ,ಮಲ್ಲಿಕಾ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/01/2021 05:05 pm