ಬಂಟ್ವಾಳ: ಸಾಕಷ್ಟು ಟೀಕೆಗಳಿಗೆ ಪ್ರತಿ ವರ್ಷವೂ ತುತ್ತಾಗುವ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆಯ ದುರಸ್ತಿ ಕಾರ್ಯ ಕೊನೆಗೂ ಆರಂಭಗೊಂಡಿದೆ. ಇದೀಗ ಪಾಣೆಮಂಗಳೂರು ಮೇಲ್ಕಾರ್ ಬಳಿಯಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದೆ.
ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಯಾಣಿಕರು ಟ್ವೀಟ್, ಮನವಿಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು. ಬಳಿಕ ಇದು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೂ ವೇದಿಕೆಯಾಯಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ರೋಡ್ ಚಾಲೆಂಜ್ ಅಭಿಯಾನವನ್ನು ಆರಂಭಿಸಿ ಈ ಕುರಿತು ಗಮನ ಸೆಳೆದಿದ್ದರೆ, ಎಸ್.ಡಿ.ಪಿ.ಐ. ಪ್ರತಿಭಟನೆಯನ್ನು ನಡೆಸಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಳೆಗಾಲದ ಬಳಿಕ ರಸ್ತೆ ದುರಸ್ತಿಗೊಳಿಸುವುದಾಗಿ ತಿಳಿಸಿದ್ದರು.
ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಸಾಕಷ್ಟು ವಿಳಂಬದೊಂದಿಗೆ ಇನ್ನೂ ಪುನಾರಂಭಗೊಂಡಿಲ್ಲ. ಈ ಮಧ್ಯೆ ರಸ್ತೆಯನ್ನಾದರೂ ಸುಸ್ಥಿತಿಗಿಡದಿದ್ದರೆ, ಅಪಘಾತಗಳು ಹೆಚ್ಚಾಗಬಹುದು ಎಂಬ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದರು. ಇದೀಗ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ರಸ್ತೆ ದುರಸ್ತಿ ಕಾರ್ಯ ಮುಂದೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಬಾರಿಯೂ ಹೀಗೇಕೆ:
ಮಳೆಗಾಲ ಆರಂಭಗೊಳ್ಳುವ ವೇಳೆ ರಸ್ತೆಗಳಲ್ಲಿ ಹೊಂಡಗಳು ಅದೇ ಜಾಗದಲ್ಲಿ ಪ್ರತ್ಯಕ್ಷಗೊಳ್ಳುತ್ತವೆ. ಮಳೆಗಾಲ ಮುಗಿದ ತಕ್ಷಣ ಇವುಗಳನ್ನು ಮುಚ್ಚುವ ಕಾರ್ಯ ನಡೆಯುತ್ತದೆ. ಕೆಲ ಸಮಯ ರಸ್ತೆಗಳು ಫಳಫಳ ಎಂದು ಹೊಳೆಯುತ್ತವೆ. ಆದರೆ ಮತ್ತೆ ಅದೇ ಪುನರಾವರ್ತನೆ. ಹೀಗೇಕೆ ಎಂದು ಪ್ರಶ್ನಿಸುತ್ತಾರೆ ರಸ್ತೆ ಬಳಕೆದಾರ ನಾರಾಯಣ ಸಿ.ಪೆರ್ನೆ.
ಮಳೆನೀರು ರಸ್ತೆಯಲ್ಲಿ ಹರಿಯುವ ಬದಲು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಿಸುವುದೇ ಇಲ್ಲ. ಪ್ರತಿ ವರ್ಷವೂ ಮಳೆ ಬಂದಾಗ ರಸ್ತೆಯ ಮಧ್ಯಭಾಗಕ್ಕೆ ಮಳೆನೀರು ತುಂಬಿರುತ್ತದೆ. ಮಂಗಳೂರು ಬಿ.ಸಿ.ರೋಡ್ ಚತುಷ್ಪಥ ರಸ್ತೆಯ ಸ್ಥಿತಿಯೂ ಹೀಗೆಯೇ ಇದೆ. ಕೆಲವು ಕಡೆ ಚರಂಡಿಗಳು ಇದ್ದರೂ ಅದರ ಕೆಸರು, ಮಣ್ಣು ತೆಗೆದು ಸುಲಭವಾಗಿ ನೀರು ಹರಿಯುವ ವ್ಯವಸ್ಥೆಯನ್ನು ಮಾಡಿಸುತ್ತಿಲ್ಲ.
ಸುಮಾರು 20 ವರ್ಷಗಳ ಹಿಂದೆ ಗ್ಯಾಂಗ್ ಮೆನ್ ಗಳು ಈ ಕೆಲಸವನ್ನು ನಿರ್ವಹಿಸುತ್ತಿದ್ದರು. ಈಗ ಯಾರೂ ಬರುವುದಿಲ್ಲ. ಮೊದಲು ರಸ್ತೆಯಲ್ಲಿ ಹೊಂಡಗಳು ಏಕೆ ಉದ್ಭವವಾಗುತ್ತದೆ ಎಂದು ಚಿಂತಿಸಿ, ಬಳಿಕ ಚತುಷ್ಪಥದಂಥ ಯೋಜನೆಗಳಿಗೆ ಕೈಹಾಕಿ ಎನ್ನುತ್ತಾರೆ ಬಳಕೆದಾರರು.
Kshetra Samachara
05/10/2020 04:25 pm