ದಕ್ಷಿಣ ರೈಲ್ವೆಯ ಮಂಗಳೂರು ಜಂಕ್ಷನ್ ನಿಂದ ಪಣಂಬೂರುವರೆಗಿನ ಹಳಿ ಡಬ್ಲಿಂಗ್ ಹಾಗೂ ವಿದ್ಯುದ್ಧೀಕರಣ ಕಾಮಗಾರಿಯ ಭಾಗವಾಗಿ ಪಚ್ಚನಾಡಿಯಲ್ಲಿ ನಡೆಯುತ್ತಿರುವ ಹೊಸ ರೈಲ್ವೆ ಮೇಲ್ಸೇತುವೆ ಕಾಮಗಾರಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.
2018ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರೈಲ್ವೆ ಹಳಿಯ ಮೇಲ್ಭಾಗದಲ್ಲಿದ್ದ ಹಳೇ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ.
ಆರಂಭಿಕ ಒಂದು ವರ್ಷ ಕಾಮಗಾರಿ ವೇಗವಾಗಿ ನಡೆಯಿತು. ಆ ಬಳಿಕ ಕುಂಟುತ್ತಿದ್ದು, ಕರೊನಾ ಲಾಕ್ಡೌನ್ ಬಳಿಕ ಕೆಲಸವೇ ನಡೆದಿಲ್ಲ.
ಈಗಾಗಲೇ ಎರಡೂ ಬದಿ ಪಿಲ್ಲರ್ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕೆ ಅಳವಡಿಸಲು ನಾಲ್ಕು ಗರ್ಡರ್ ನಿರ್ಮಿಸಿ ಸ್ಥಳದಲ್ಲಿ ಇರಿಸಲಾಗಿದ್ದು, ಇದು ಬಿಸಿಲು-ಮಳೆ ಹೊಡೆತಕ್ಕೆ ಶಿಥಿಲವಾಗುವ ಸಾಧ್ಯತೆಯಿದೆ.
ಸ್ಥಳದಲ್ಲಿ ಹುಲ್ಲು-ಪೊದೆ ಬೆಳೆದು ಪಾಳು ಬಿದ್ದಿದೆ.
ಗರ್ಡರ್ ಅಳವಡಿಕೆಗೆ ಸಿಕ್ಕಿಲ್ಲ ಅನುಮತಿ: ಗರ್ಡರ್ ಅಳವಡಿಕೆ ಕ್ಲಿಷ್ಟಕರ ಕೆಲಸವಾಗಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಅಧಿಕ.
ಎಚ್ಚರ ತಪ್ಪಿದರೆ ರೈಲು ಹಳಿಗಳಿಗೂ ಹಾನಿಯಾಗಬಹುದು. ಆದ್ದರಿಂದ ಕಾಮಗಾರಿ ವೇಳೆ ಕೆಲ ಹೊತ್ತು ರೈಲು ಸಂಚಾರ ನಿಲ್ಲಿಸಬೇಕಾಗುತ್ತದೆ.
ಆದ್ದರಿಂದ ಮುಂದಿನ ಕಾಮಗಾರಿಗೆ ರೈಲ್ವೆ ಇಲಾಖೆಯ ಸೇಫ್ಟಿ ಕಮಿಷನರ್ ಅನುಮತಿ ಬೇಕಾಗಿದೆ.
ಈಗಾಗಲೇ ಸ್ಥಳ ಪರಿಶೀಲಿಸಲಾಗಿದ್ದು, ಕಾಮಗಾರಿ ಮುಂದುವರಿಸುವ ಕುರಿತು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ.
ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಿ, ಸೇತುವೆ ಪೂರ್ಣಗೊಳಿಸಲಾಗುವುದು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಲೆವೆಲ್ ಕ್ರಾಸಿಂಗ್ ನಿಂದ ಸಮಸ್ಯೆ : ರೈಲ್ವೆ ಮೇಲ್ಸೇತುವೆ ಪಕ್ಕದಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮಾಡಿ ಗೇಟ್ ಅಳವಡಿಸಲಾಗಿದೆ.
ಇದರಿಂದ ಜನರಿಗೆ ಪ್ರತಿದಿನ ಸಮಸ್ಯೆಯಾಗುತ್ತಿದೆ. ಒಂದು ಬಾರಿ ಗೇಟ್ ಹಾಕಿದರೆ ತೆರೆಯಲು ಕನಿಷ್ಠ 15-20 ನಿಮಿಷ ಬೇಕಾಗುತ್ತದೆ. ಪರಿಣಾಮ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.
ತುರ್ತು ಸಂಚಾರ ಮಾಡುವವರಿಗೆ ತೊಂದರೆ ಆಗುವುದರ ಜತೆಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಬಸ್ಗಳು ಟ್ರಿಪ್ ಕಡಿತ ಮಾಡಿ ಸ್ಥಳೀಯರಿಗೂ ಸಮಸ್ಯೆಯಾಗುತ್ತಿದೆ. ಶೀಘ್ರ ಸೇತುವೆ ನಿರ್ಮಿಸಿ ಎನ್ನುವ ಬೇಡಿಕೆ ಸ್ಥಳೀಯರದ್ದು.
ರಸ್ತೆ ಕಾಮಗಾರಿಯೂ ಬಾಕಿ: ನೂತನ ಸೇತುವೆ 12 ಮೀ.ಅಗಲ ಹಾಗೂ ಸುಮಾರು 25 ಮೀ. ಉದ್ದಕ್ಕೆ ನಿರ್ಮಾಣವಾಗಲಿದೆ.
ಹಳೇ ಸೇತುವೆಯ ಪಿಲ್ಲರ್ ಇದ್ದ ಜಾಗದಲ್ಲಿ ಎರಡನೇ ಜತೆ ಹಳಿ ಹಾದು ಹೋಗುವುದರಿಂದ ಸೇತುವೆಯ ಉದ್ದ ಹೆಚ್ಚಿಸಲಾಗಿದೆ.
ಜತೆಗೆ ಎತ್ತರವನ್ನೂ ಹಳೇ ಸೇತುವೆಗಿಂತ ಕೆಲವು ಮೀಟರ್ಗಳಷ್ಟು ಹೆಚ್ಚಿಸಲಾಗಿದೆ. ಆರಂಭಿಕ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಸ್ತುತ ಯೋಜನಾ ವೆಚ್ಚ 1-2 ಕೋಟಿ ರೂ. ಹೆಚ್ಚಾಗಬಹುದು ಎನ್ನುತ್ತಾರೆ ಅಧಿಕಾರಿಗಳು.
ಈ ನಡುವೆ ಸೇತುವೆ ಕೆಲಸ ಪೂರ್ಣವಾಗದೆ ಬೋಂದೆಲ್ ಚರ್ಚ್-ವಾಮಂಜೂರು ರಸ್ತೆ ಕಾಂಕ್ರೀಟ್ ಕಾಮಗಾರಿಯೂ ಅರ್ಧದಲ್ಲಿ ಸ್ಥಳಗಿತವಾಗಿದೆ.
ಪಿಲ್ಲರ್ ಕೆಲಸ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿಗೆ ರೈಲ್ವೆ ಇಲಾಖೆ ಸೇಫ್ಟಿ ಕಮಿಷನರ್ ಅವರಿಂದ ಕ್ಲಿಯರೆನ್ಸ್ ಸಿಗಲು ಬಾಕಿ ಇದೆ.
ಈ ಕುರಿತಂತೆ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ನಡೆಯುತ್ತಿದ್ದು, ಶೀಘ್ರ ಅನುಮತಿ ದೊರೆಯುವ ನಿರೀಕ್ಷೆಯಿದೆ. ಒಂದು ಸಲ ಗರ್ಡರ್ ಅಳವಡಿಕೆಯಾದರೆ ಶೇ.90ರಷ್ಟು ಕೆಲಸಗಳು ಮುಗಿದಂತೆ.
ಎಂ.ಕೆ.ಗೋಪಿನಾಥ್, ಪಿಆರ್ಒ ದಕ್ಷಿಣ ರೈಲ್ವೆ, ಪಾಲಕ್ಕಾಡ್ ವಿಭಾಗ
ಕೃಪೆ: ವಿ.ವಾ
Kshetra Samachara
29/11/2020 02:57 pm