ಮಂಗಳೂರು: ನಾಲ್ಕು ಸಯಾಮಿ ಬೆಕ್ಕಿನ ಮರಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿರುವ ಅಪರೂಪದ ಶಸ್ತ್ರ ಚಿಕಿತ್ಸೆ ನಗರದ ಅಡ್ಯಾರ್ನಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ನಡೆಯಿತು.
ಕಲ್ಲಡ್ಕ ಸಮೀಪದ ನಿವಾಸಿಯೋರ್ವರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿದ್ದು ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿತ್ತು. ಬೆಕ್ಕು ಪ್ರೇಮಿಯಾಗಿರುವ ಅವರು ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಸಲುವಾಗಿ ತಾಲೂಕಿನ ಕೆಲವೊಂದು ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಯಾವುದೇ ಪಶು ವೈದ್ಯಾಧಿಕಾರಿಗಳೂ ಸಯಾಮಿ ಅವಳಿ ಬೆಕ್ಕಿನ ಮರಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಲ್ಲಿ ಅದು ಬದುಕಿ ಉಳಿಯಲ್ಲ ಎಂಬ ಕಾರಣ ನೀಡಿ ಬೇರ್ಪಡಿಸಲು ನಿರಾಕರಿಸಿದ್ದಾರೆ.
ಬಳಿಕ ಅವರು ಮಂಗಳೂರಿನ ಅಡ್ಯಾರ್ ಪಶು ಚಿಕಿತ್ಸಾಲಯಕ್ಕೆ ಬೆಕ್ಕಿನ ಮರಿಗಳನ್ನು ತಂದಿದ್ದಾರೆ. ಈ ಸಂದರ್ಭ ಅಲ್ಲಿನ ವೈದ್ಯರು ಹಕ್ಕಿಜ್ವರದ ಕರ್ತವ್ಯಕ್ಕೆ ಹೋಗಿರುವುದರಿಂದ ಅಲ್ಲಿಗೆ ಕೆಲಸದ ನಿಮಿತ್ತ ಬಂದಿದ್ದ ಬಜಾಲ್ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯ ಪರೀಕ್ಷಕ ಕೆ.ಪ್ರಮೋದ್ ಇದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ನಾಲ್ಕು ಸಯಾಮಿ ಬೆಕ್ಕಿನ ಮರಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿ, ಸೂಕ್ತ ಚಿಕಿತ್ಸೆ ನೀಡಿ ಅದನ್ನು ಬೆಕ್ಕಿನ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.
Kshetra Samachara
21/01/2021 01:30 pm