ಮುಲ್ಕಿ: ಅಜಾತಶತ್ರುವಾಗಿ ಶೈಕ್ಷಣಿಕ, ಸಾಮಾಜಿಕ ಸಾಧಕರಾಗಿ ಶ್ರೀ ಮುರುಡೇಶ್ವರ ಕ್ಷೇತ್ರವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿ ಪಡಿಸಿದ ಮಹಾನ್ ಸಾಧಕ ಆರ್. ಎನ್. ಶೆಟ್ಟಿಯವರ ಜೀವನದ ಹೆಜ್ಜೆ ಗುರುತು ಎಲ್ಲರಿಗೂ ಮಾದರಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿ ಸುಂದರರಾಮ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಆರ್ .ಎನ್. ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಮುಲ್ಕಿ ಬಪ್ಪನಾಡು ಕ್ಷೇತ್ರದ ಶ್ರೀ ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ಇಂದು ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ವಿಶ್ವ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಕೀರ್ತಿ ತಂದ ಆರ್ .ಎನ್. ಶೆಟ್ಟಿಯವರು ಯುವ ಜನತೆಗೆ ಮಾದರಿಯಾಗಿದ್ದು, ಅವರ ಜೀವನ ಚರಿತ್ರೆ ಗ್ರಂಥ ರೂಪದಲ್ಲಿ ಪ್ರಕಟಿಸಿ ಜನ ಮಾನಸದಲ್ಲಿ ಶಾಶ್ವತವಾಗಿಸಬೇಕು ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆ ಬಗ್ಗೆ ದೂರದರ್ಶಿತ್ವದ ಕನಸನ್ನು ಹೊತ್ತಿದ್ದ ಮಹಾನ್ ಸಾಧಕ ಆರ್.ಎನ್. ಶೆಟ್ಟಿಯವರು ಮುಂದಿನ ಪೀಳಿಗೆಗೆ ಮಾದರಿ.
ಅತ್ಯುನ್ನತ ವ್ಯಕ್ತಿಯಾದರೂ ಸರಳ ಜೀವನ ಕ್ರಮಗಳಿಂದ ಎಲ್ಲರೊಂದಿಗೂ ಸಹೃದಯರಾಗಿ ಬೆರೆಯುವ ವ್ಯಕ್ತಿತ್ವ ಮಾದರಿ ಎಂದರು.
ಈ ಸಂದರ್ಭ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಹೆಗ್ಡೆ, ಸುಮಂಗಲಾ ಪೂಂಜ, ಡಾ.ಎಂ.ಎ.ಆರ್. ಕುಡ್ವ, ಕಕ್ವಗುತ್ತು ಸುಕುಮಾರ ಶೆಟ್ಟಿ, ರವಿರಾಜ ಶೆಟ್ಟಿ ನುಡಿನಮನ ಸಲ್ಲಿಸಿದರು.
ಮನೋಹರ ಶೆಟ್ಟಿ, ಎಂ.ಎಚ್.ಅರವಿಂದ ಪೂಂಜ, ರಾಮಚಂದ್ರ ನಾಯ್ಕ್, ಜೀವನ್ ಶೆಟ್ಟಿ, ಗುರುವಪ್ಪ ಕೋಟ್ಯಾನ್, ರಮೇಶ್ ಅಮೀನ್ ಕೊಕ್ಕರಕಲ್, ಅಶೋಕ್ ಕುಮಾರ್ ಶೆಟ್ಟಿ, ಗಂಗಾಧರ ಶೆಟ್ಟಿ ಬರ್ಕೆತೋಟ, ರಂಗನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.
Kshetra Samachara
01/01/2021 07:50 am