ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಶ್ಯಾಮರಾವ್ ನಿಧನ

ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ ರಾಜೀವಿ, ಪುತ್ರ ಸತೀಶ್ ಹಾಗೂ ಐದು ಮಂದಿ ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಬಳಗ ಅಗಲಿದ್ದಾರೆ.

ಮೂಲತಃ ಬಿ.ಸಿ.ರೋಡಿನವರಾದ ಇವರು ಕೆಲವು ಸಮಯಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಕಲಿತದ್ದು ೭ನೇ ತರಗತಿವರೆಗೆ. ಆದರೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಪಂಚಭಾಷೆ ಬಲ್ಲವರು.

ವಿದ್ಯಾರ್ಥಿ ದೆಸೆಯಿಂದಲೇ ಬಾವುಟ ಹಿಡಿಯುವುದು, ಜೈಕಾರ ಕೂಗುವುದು, ಕರಪತ್ರ ಹಂಚುವುದು ಹೀಗೆ ಕ್ರಾಂತಿಕಾರಿಯೆಂದು ಗುರುತಿಸಿಕೊಂಡಿದ್ದ ಇವರು, 1942 ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

1923 ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ ಅವರು, ಎಂ.ಡಿ.ಶ್ಯಾಮರಾವ್ ಎಂದೇ ಪ್ರಸಿದ್ಧರು.

1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ 2 ತಿಂಗಳ ಜೈಲು ಶಿಕ್ಷೆ ಗೆ ಒಳಗಾದರು. ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯ ಮುಂದುವರೆಸಿಕೊಂಡು, ಗಾಂಧೀಜಿ ಯವರು ಹಾಕಿಕೊಟ್ಟ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ಗಾಂಧೀಜಿಯವರ ಕನಸಿನಂತೆ , ಶಿವಮೊಗ್ಗದ ಗಾಂಧಿ ಮಂದಿರದಲ್ಲಿ ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೆ ಹಿಂದಿ ಪಾಠ ಮಾಡಿದರು. ಜೀವನೋಪಾಯಕ್ಕಾಗಿ ಟೈಪ್ ರೈಟರ್ ರಿಪೇರಿ , ಮೆಡಿಕಲ್ ಸಾಧನ ರಿಪೇರಿ ಮಾಡುತ್ತಿದ್ದರು.

ಆ ಸಮಯದಲ್ಲಿ ಬಾಂಬೆ, ಬೆಂಗಳೂರಿನಿಂದ ತಂತ್ರಜ್ಞರು ಬರ ಬೇಕಾಗಿದ್ದ ಸಂದರ್ಭ ಅವರ ಕೆಲಸ ಸ್ವತಃ ಕಲಿತು , ಸೇವಾ ಮನೋಭಾವದಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾದರು. ಬೆರಳಚ್ಚು, ಹೊಲಿಗೆ ಯಂತ್ರ, ಕಲ್ಲಚ್ಚು, ಆಟೋ ಮೀಟರ್, ಸೂಕ್ಷ್ಮ ದರ್ಶಕ, ದೂರದರ್ಶಕ ಮೊದಲಾದ ಸೂಕ್ಷ್ಮ ಯಂತ್ರ ದುರಸ್ತಿ ಮಾಡುತ್ತಿದ್ದರು.

ಆಸ್ಪತ್ರೆಗಳಲ್ಲಿನ ಆರೋಗ್ಯ ಸಂಬಂಧಿ ಹಳೆ ಯಂತ್ರಗಳ ರಿಪೇರಿಗಾಗಿ ಶಿವಮೊಗ್ಗದ ಕೆಲ ವೈದ್ಯರು ಇತ್ತೀಚಿನವರೆಗೂ ಇವರ ನೆರವು ಪಡೆಯುತ್ತಿದ್ದರು.

ಅಂಬರ ಚರಕದಲ್ಲಿ ನೂಲು ತೆಗೆಯುವುದರಲ್ಲಿ ವಿಶೇಷ ಪರಿಣತಿ ಹೊಂದಿದ ಇವರು, ಮನೆಮನೆಗೆ ತೆರಳಿ ಚರಕದಿಂದ ನೂಲು ತೆಗೆಯುವ ತರಬೇತಿ ನೀಡಿದ್ದಾರೆ.

ಚಿನ್ನದ ಕೆಲಸದಲ್ಲೂ ವಿಶೇಷ ಪ್ರಾವೀಣ್ಯತೆ ಹೊಂದಿದ್ದು, ಹೋರಾಟದ ಆ ದಿನಗಳಲ್ಲಿ ರಾತ್ರಿ ಹೊತ್ತು ತನ್ನ ಅಣ್ಣ ಪುಟ್ಟಣ್ಣ ಆಚಾರ್ ರೊಂದಿಗೆ ಚಿನ್ನದ ಕೆಲಸ ಮಾಡಿಕೊಂಡಿದ್ದರು.

ಇವರ ದೇಶಪ್ರೇಮಿ ಬದುಕನ್ನು ಗೌರವಿಸಿ, ಈಗಾಗಲೇ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದೆ. ಶಿವಮೊಗ್ಗದ ಶ್ರೀ ಕಾಳಿಕಾ ಪರಮೇಶ್ವರಿ ಸೊಸೈಟಿಯ ಪ್ರಾರಂಭದ ಕಮಿಟಿ ಸದಸ್ಯ , ಶಿವಮೊಗ್ಗದಲ್ಲಿ ಸತ್ಯಸಾಯಿ ಮಂದಿರ ಹುಟ್ಟು ಹಾಕಿದವರಲ್ಲಿ ಒಬ್ಬರಾದ ಇವರು, ಲೋಕ ಸಮಸ್ತಾ ಸುಖಿನೋ ಭವಂತು ಎನ್ನುವ ವಾಕ್ಯವನ್ನು ತಮ್ಮ ಮಂತ್ರವನ್ನಾಗಿಸಿ ಸೇವೆ ಸಲ್ಲಿಸಿದ ಮಹನೀಯರು.

Edited By : Nirmala Aralikatti
Kshetra Samachara

Kshetra Samachara

03/11/2020 10:11 am

Cinque Terre

7.39 K

Cinque Terre

1

ಸಂಬಂಧಿತ ಸುದ್ದಿ