ಸುರತ್ಕಲ್ : ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ನಿರಂತರ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಒಳಪಟ್ಟ ತಡಂಬೈಲ್ ನ ವೀರ ಕೇಸರಿ ಸೇವಾಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತಾಗಲಿ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು.
ಮಾರಿಗುಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾರಿಗುಡಿ ಬಳಿ ವೀರ ಕೇಸರಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೀರ ಕೇಸರಿ ಸೇವಾ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕ್ರೀಡೆ, ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ. ಈ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆಯರು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದರು.
ಮನಪಾ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ ವೀರಕೇಸರಿ ಸಂಸ್ಥೆ ಕೋರೊನಾ ಸಂದರ್ಭದಲ್ಲಿ ಬಹಳಷ್ಟು ಕುಟುಂಬಗಳಿಗೆ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಿ ನೆರವು ನೀಡಿದೆ. ಈ ಸಂಸ್ಥೆಗೆ ನ್ಯಾಯಯುತವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸ ಬೇಕು. ಆ ನಿಟ್ಟಿನಲ್ಲಿ ಶಾಸಕರೊಂದಿಗೆ, ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವೀರ ಕೇಸರಿ ಸಂಸ್ಥೆಯ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೀಪಾ ಟ್ರೇಡರ್ಸ್ ನ ಮಾಲಕ ರಮೇಶ್ ರಾವ್, ಕಾರ್ಪೋರೇಟರ್ ಶೋಭಾ ರಾಜೇಶ್, ಕೃಷ್ಣಾಪುರ ಕೋರ್ದಬ್ಬು ದೈವಸ್ಥಾನ ಸಮಿತಿಯ ಉಪಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜಯಕಾಂಚನ್ , ಟಿ ಎನ್ ರಮೇಶ್ ರಾವ್, ನ್ಯಾಯವಾದಿ ಗಿರೀಶ ಶೆಟ್ಟಿ, ವೀರ ಕೇಸರಿ ಸಂಸ್ಥೆಯ ಅಧ್ಯಕ್ಷ ಕೈಲಾಸ್ ಟಿ ತಡಂಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿಜಯಕಾಂಚನ್ ಮತ್ತು ಮಾಸ್ಟರ್ ಅಕ್ಷಜ್ ಅವರನ್ನು ಗೌರವಿಸಲಾಯಿತು. ಅನೂಪ್ ಶೆಟ್ಟಿ ಪ್ರಾರ್ಥನೆಗೈದರು. ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು. ಪದ್ಮನಾಭ ಕರ್ಕೇರ ವಂದಿಸಿದರು. ರೂಪೇಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಾಪು ರಂಗತರಂಗ ಕಲಾವಿದರಿಂದ ಅಧ್ಯೆಕ್ಷೆರ್ ನಾಟಕ ಪ್ರದರ್ಶನಗೊಂಡಿತು.
Kshetra Samachara
01/04/2022 04:13 pm