ಮಂಗಳೂರು: ತಂಬಾಕಿನಲ್ಲಿರುವ ನಿಕೋಟಿನ್ ಎಂಬ ರಾಸಾಯನಿಕವು ಸೇವನೆಯ 10 ಸೆಕೆಂಡ್ಗಳಲ್ಲಿಯೇ ಮೆದುಳಿಗೆ ತಲುಪಿ ಬಳಕೆ ಮಾಡುವವರಲ್ಲಿ ಚಟವನ್ನಾಗಿಸುತ್ತದೆ. ಧೂಮಪಾನ ಡ್ರಗ್ಸ್ ಗೆ ಸಮಾನ ಮಾತ್ರವಲ್ಲದೆ, ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಆದರೆ ಧೂಮಪಾನ, ತಂಬಾಕು ಸೇವನೆ ಕಾನೂನು ಸಮ್ಮತವಾಗಿರುವುದರಿಂದ ಜನರಿಗೆ ಇದರ ಗಂಭೀರತೆ ಇನ್ನೂ ಅರ್ಥವಾಗಿಲ್ಲ ಎಂದು ಕ್ಷೇಮಾ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪಾ ಕಾಯ್ದೆ 2003ರ ಬಗ್ಗೆ ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಅವರು, ತಂಬಾಕಿನಲ್ಲಿ 4 ಸಾವಿರ ಬಗೆಯ ರಾಸಾಯನಿಕಗಳಿದ್ದು, ಇವುಗಳಲ್ಲಿ 60 ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿದೆ. ಕೀಟನಾಶಕವಾಗಿ ಉಪಯೋಗಿಸಲಾಗುವ ತಂಬಾಕು ಎಲೆಯನ್ನು ಟಾಯ್ಲೆಟ್ ಕ್ಲೀನರ್ ಗಳಿಗೂ ಬಳಕೆ ಮಾಡಲಾಗುತ್ತದೆ ಎಂದರು.
ತಂಬಾಕು, ಧೂಮಪಾನ ಚಟವಿರುವವರು ಹೃದಯ ಸಂಬಂಧಿ, ಕರುಳು ಹಾಗೂ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗಲಿದ್ದಾರೆ. ತಲೆಗೂದಲು ಉದುರುವುದು, ವಯಸ್ಸಾದಂತೆ ಕಾಣುವುದು, ಹಲ್ಲುಗಳು ಸಡಿಲವಾಗುವುದು, ಉಬ್ಬಸ, ಉಸಿರಿನ ದುರ್ವಾಸನೆಯೂ ಕಂಡು ಬರುತ್ತದೆ. ಧೂಮಪಾನಿಗಳ ಮಕ್ಕಳಲ್ಲಿ ಸೀಳು ತುಟಿಯ ಸಮಸ್ಯೆ, ಕಡಿಮೆ ತೂಕದ ಮಗು ಜನನ ಮೊದಲಾದ ಸಮಸ್ಯೆಗಳೂ ಕಂಡು ಬರುತ್ತದೆ ಎಂದು ಡಾ.ಜಗನ್ನಾಥ್ ವಿವರಿಸಿದರು.
ದ.ಕ. ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ಮಾತನಾಡಿ, ಧೂಮಪಾನವು ಅದನ್ನು ಸೇದುವವರ ಆರೋಗ್ಯದ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಲ್ಲದೆ ಅವರ ಜತೆಗಿರುವವರಿಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆ ಬಗ್ಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಎನ್ಟಿಸಿಪಿ ಜಿಲ್ಲಾ ಸಲಹೆಗಾರ ಹನುಮಂತರಾಯಪ್ಪ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
Kshetra Samachara
09/02/2021 10:47 pm