ಮುಲ್ಕಿ: ಹಳೆಯಂಗಡಿ ಸಮೀಪದ 10ನೇ ತೋಕೂರಿನ ಫೇಮಸ್ ಯೂತ್ ಕ್ಲಬ್ ನ 33ನೇ ವಾರ್ಷಿಕೋತ್ಸವ ಜರುಗಿತು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ ವಹಿಸಿದ್ದರು. ಅವರು ಮಾತನಾಡಿ, ಫೇಮಸ್ ಯೂತ್ ಕ್ಲಬ್ ನ ಸಾಧನೆಗಳನ್ನು ಪ್ರಶಂಸಿಸಿದರು. ಅಲ್ಲದೆ, ಆಪತ್ಪಾಂಧವ ಆಸಿಫ್ ಅವರ ಸಮಾಜಮುಖಿ ಕೆಲಸ ಗುರುತಿಸಿ ಸನ್ಮಾನಿಸುವುದರ ಜೊತೆಗೆ ಮೈಮುನಾ ಫೌಂಡೇಶನ್ ಗೆ ಆಹಾರ, ಪರಿಕರ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಪ್ರತಿಗ್ರಾಮದಲ್ಲಿ ಯುವ ಸಂಘಟನೆಗಳು ಇಂತಹ ಸಮಾಜಮುಖಿ ಕೆಲಸ ಕೈಗೊಂಡಲ್ಲಿ ಗ್ರಾಮಗಳು ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಪಂ ಸದಸ್ಯ ದಿವಾಕರ ಕರ್ಕೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಸಹಾಯಕ ಕ್ರೀಡಾಧಿಕಾರಿ ವಿನೋದ್ ಕುಮಾರ್ ಸಸಿಹಿತ್ಲು, ಪಡುಪಣಂಬೂರು ಗ್ರಾಪಂ ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್ ದಾಸ್, ಗೌರವಾಧ್ಯಕ್ಷ ಗುರುರಾಜ ಪೂಜಾರಿ, ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷ ಭಾಸ್ಕರ್ ಅಮೀನ್ ಉಪಸ್ಥಿತರಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಾ ಬರುತ್ತಿರುವ ಕಾರ್ನಾಡು ಮೈಮುನಾ ಫೌಂಡೇಶನ್ ನ ಆಪತ್ಪಾಂಧವ ಆಸಿಫ್ ಅವರನ್ನು ಗೌರವಿಸಲಾಯಿತು ಹಾಗೂ ಮೈಮುನಾ ಫೌಂಡೇಶನ್ ಗೆ ಆಹಾರ ಸಾಮಗ್ರಿ ಹಸ್ತಾಂತರಿಸಲಾಯಿತು. ಬಳಿಕ ಕ್ರೀಡಾಕೂಟ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೈಷ್ಣವಿ ಕಲಾವಿದರು ಕೊಯಿಲ ಅವರಿಂದ "ಕುಸಲ್ದ ಗೌಜಿ" ಜರುಗಿತು. ಸಂಪತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
09/01/2021 10:41 pm