ಮೂಡುಬಿದಿರೆ: ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ, ಏಳು ಕಂಬಳಗಳಿಗೆ ದಿನ ನಿಗದಿ, ಹಗಲಲ್ಲೇ ಎರಡು ದಿನಗಳಲ್ಲಿ ಕಂಬಳ ನಡೆಸುವುದು ಸಹಿತ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಕಂಬಳ ಆಯೋಜನೆ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಪಿ. ಆರ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 7 ಕಂಬಳ ನಡೆಸಲು ವ್ಯವಸ್ಥಾಪಕರು ಮುಂದೆ ಬಂದಿದ್ದು, ಹೊಂದಾಣಿಕೆಯಿಂದ ದಿನಾಂಕ ನಿಶ್ಚಯಿಸಲಾಯಿತು.
ಅದರಂತೆ ಹೊಕ್ಕಾಡಿಗೋಳಿ (ಜ.30, 31), ಐಕಳ ಬಾವ (ಫೆ.6, 7), ವಾಮಂಜೂರು ತಿರುವೈಲುಗುತ್ತು (ಫೆ.13, 14). ಮೂಡುಬಿದಿರೆ (ಫೆ.20, 21), ಮಿಯ್ಯಾರು (ಫೆ. 27, 28). ಬಂಗ್ರಕೂಳೂರು (ಮಾ.6, 7), ವೇಣೂರು ಪೆರ್ಮುಡ (ಮಾ.20, 21) ಕಂಬಳ ಸ್ಪರ್ಧೆ ದಿನಾಂಕ ಘೋಷಿಸಲಾಯಿತು. ಮಾ.13ರಂದು ಅಮಾವಾಸ್ಯೆ ಕಾರಣ ಅಂದು ಕಂಬಳವಿಲ್ಲ.
ಸೆಲೆಬ್ರಿಟಿಗಳನ್ನು ಆಹ್ವಾನಿಸಿದರೆ ಜನದಟ್ಟಣೆ ನಿಯಂತ್ರಿಸಲು ಕಷ್ಟವಾಗುವ ಕಾರಣ ಆದಷ್ಟು ಸರಳವಾಗಿ ಕಂಬಳ ನಡೆಸುವುದನ್ನು ಸಭೆ ಅನುಮೋದಿಸಿತು.
ಸಮಿತಿ ಗೌರವ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಕೊಳಕ್ಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಸಮಿತಿ ಗೌರವ ಸಲಹೆಗಾರರಾದ ಬೆಳುವಾಯಿ ಸದಾನಂದ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ಮಾಳ ದಿನೇಶ ಶೆಟ್ಟಿ, ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹೊಸಬೆಟ್ಟು ಏರಿಮಾರುಬರ್ಕೆ ಚಂದ್ರಹಾಸ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
ಕೋಣಗಳ ಯಜಮಾನರು, ವ್ಯವಸ್ಥಾಪಕರ ಪೈಕಿ ನವೀನ್‍ಚಂದ್ರ ಆಳ್ವ ವಾಮಂಜೂರು ತಿರುವೈಲುಗುತ್ತು, ರವೀಂದ್ರ ಕುಮಾರ್ ಕುಕ್ಕುಂದೂರು, ಮುಚ್ಚೂರು ಲೋಕೇಶ್ ಶೆಟ್ಟಿ , ವಿಜಯ ಕುಮಾರ ಕಂಗಿನಮನೆ, ಗೋಪಾಲಕೃಷ್ಣ ಹೊಸಬೆಟ್ಟು , ಪುತ್ತೂರು ಚಂದ್ರಹಾಸ ಶೆಟ್ಟಿ , ಭಾಸ್ಕರ್ ಕೋಟ್ಯಾನ್, ಮೊದಲಾದವರು ನಾನಾ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ನಿರೂಪಿಸಿದರು.
Kshetra Samachara
03/01/2021 07:21 am