ಬಂಟ್ವಾಳ: ಬಿ.ಸಿ. ರೋಡಿನ ಆಟೋರಿಕ್ಷಾ ಚಾಲಕ, ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಅಬ್ದುಲ್ ಸತ್ತಾರ್ ಮಂಗಳವಾರ (ಅ.6) ತನ್ನ ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋದ ನಗದು ಹಾಗೂ ಇನ್ನಿತರ ಮೌಲ್ಯಯುತ ದಾಖಲೆಗಳಿದ್ದ ಪರ್ಸನ್ನು ವಾರೀಸುದಾರರನ್ನು ಹುಡುಕಿ ಮರಳಿಸುವ ಮೂಲಕ ಮತ್ತೊಮ್ಮೆ ತನ್ನ ಪ್ರಾಮಾಣಿಕತೆ ಮೆರೆದಿದ್ದಾರೆ.
ಸತ್ತಾರ್ ಮಂಗಳವಾರ ಬೆಳಿಗ್ಗೆ 11ಕ್ಕೆ ತುಂಬೆಯಿಂದ ಬಿ.ಸಿ. ರೋಡು ಕಡೆ ತನ್ನ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ತುಂಬೆ ಜಂಕ್ಷನ್ನಿನಲ್ಲಿ ಇಬ್ಬರು ಅಸ್ಸಾಂ ಮೂಲದ ವ್ಯಕ್ತಿಗಳು ರಿಕ್ಷಾ ಏರಿದ್ದರು. ಇವರು ಬಿ.ಸಿ. ರೋಡಿನ ಭಗವತಿ ಬ್ಯಾಂಕ್ ಬಳಿ ಆಟೋ ರಿಕ್ಷಾದಿಂದ ಇಳಿದಿದ್ದರು. ಬಳಿಕ ಸತ್ತಾರ್ ಎಂದಿನಂತೆ ಬಿ. ಸಿ. ರೋಡಿನ ರಿಕ್ಷಾ ಪಾರ್ಕಿನಲ್ಲಿ ನಿಂತಿದ್ದಾಗ ರಿಕ್ಷಾದ ಹಿಂದಿನ ಆಸನದಲ್ಲಿ ಪರ್ಸ್ ಬಿದ್ದಿರುವುದು ಗಮನಕ್ಕೆ ಬಂದಿದೆ.
ಪರ್ಸಿನಲ್ಲಿ 10 ಸಾವಿರಕ್ಕೂ ಮಿಕ್ಕಿದ ನಗದು ಹಣ, ಇತರ ಕೆಲ ಮೌಲ್ಯಯುತ ದಾಖಲೆ, ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳಿದ್ದವು. ಆದರೆ, ಯಾವುದೇ ದಾಖಲೆಗಳಲ್ಲೂ ಸಂಬಂಧಪಟ್ಟವರ ಮೊಬೈಲ್ ಸಂಖ್ಯೆ ಕಂಡು ಬರಲಿಲ್ಲ.
ಈ ಸಂಬಂಧ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಗಳನ್ನು ಸ್ಥಳೀಯವಾಗಿ ಸತ್ತಾರ್ ಹುಡುಕಾಡಿದರೂ ಎಲ್ಲಿಯೂ ಕಂಡು ಬಾರದ ಹಿನ್ನಲೆಯಲ್ಲಿ ನೇರವಾಗಿ ಬಿ.ಸಿ. ರೋಡಿನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹದೇವ್ ಅವರ ಬಳಿ ವಿಷಯ ಪ್ರಸ್ತಾಪಿಸಿದರು.
ಇಬ್ಬರು ಜೊತೆಯಾಗಿ ಪರ್ಸ್ ವಾರೀಸುದಾರರಿಗೆ ಹುಡುಕಾಡಿದಾಗ ಇಬ್ಬರು ವ್ಯಕ್ತಿಗಳು ಬಿ.ಸಿ.ರೋಡಿನ ಮಣಪ್ಪುರಂ ಫೈನಾನ್ಸ್ ನಲ್ಲಿ ಕಂಡು ಬಂದಿದ್ದಾರೆ. ಈ ಸಂದರ್ಭ ರಿಕ್ಷಾದಲ್ಲಿ ದೊರೆತ ಪರ್ಸಿನ ಬಗ್ಗೆ ಗುರುತು ಪರಿಚಯ ವಿಚಾರಿಸಿ ಮನವರಿಕೆಯಾದ ಬಳಿಕ ಪರ್ಸನ್ನು ಪೊಲೀಸ್ ಸಿಬ್ಬಂದಿ ಸಹದೇವ್ ಸಮ್ಮುಖದಲ್ಲಿ ಸತ್ತಾರ್, ವಾರೀಸುದಾರರಾದ ಅಸ್ಸಾಂ ನಿವಾಸಿ ಆರಿಫ್ ಗೆ ಹಸ್ತಾಂತರಿಸಿದರು.
ಸತ್ತಾರ್ ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ಹಲವರನ್ನು ರಕ್ಷಿಸಿ 'ನೇತ್ರಾವತಿ ವೀರ' ಎಂಬ ಬಿರುದನ್ನೂ ಈ ಹಿಂದೆ ಪಡೆ ದಿದ್ದು, ಹಲವು ಬಾರಿ ತನ್ನ ರಿಕ್ಷಾದಲ್ಲಿ ಬಿಟ್ಟುಹೋದ ಮೌಲ್ಯಯುತ ಸಾಮಗ್ರಿ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್ ಆರ್ ಎಸ್) ಸಂಚಾಲಕ ಸತ್ತಾರ್, ಬಿಎಂಎಸ್ ರಿಕ್ಷಾ ಯೂನಿಯನ್ ಸದಸ್ಯರೂ ಆಗಿದ್ದಾರೆ.
Kshetra Samachara
06/10/2020 06:21 pm