ಸುಳ್ಯ ತಾಲೂಕಿನ ಕಸಬಾ ಎಂಬಲ್ಲಿ ನಿನ್ನೆ ರಾತ್ರಿ ಗಂಟೆ ಸುಮಾರು 10:15 ರ ಸಮಯದಲ್ಲಿ ಯುವಕನೊಬ್ಬನ ಮೇಲೆ ಅಪರಿಚಿತ ತಂಡದಿಂದ ಗುಂಡಿನ ದಾಳಿ ನಡೆದಿದ್ದು, ಗುಂಡು ಗುರಿ ತಪ್ಪಿದ ಹಿನ್ನೆಲೆಯಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುಳ್ಯದ ಕಸಬಾ ಗ್ರಾಮದ ಜಯನಗರ ನಿವಾಸಿ ಸಾಯಿ ಎಂಬವರು ಸುಳ್ಯದ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಸಮೀಪ ತನ್ನ ಕ್ರೆಟ್ಟಾ ಕಾರನ್ನು ನಿಲ್ಲಿಸಿ ತನ್ನ ತಂಗಿಯ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗಿ ಬಂದು ತನ್ನ ಕಾರಿನ ಡೋರ್ ತೆರೆಯುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಬಂದ ನಾಲ್ಕು ಮಂದಿಯ ದುಷ್ಕರ್ಮಿಗಳ ತಂಡ ಸಾಯಿಯವರ ಕಡೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಗುಂಡು ಅದೃಷ್ಟವಶಾತ್ ಸಾಯಿಗೆ ತಾಗದೆ ಅವರ ಕಾರಿಗೆ ತಾಗಿ ಕಾರು ಜಖಂಗೊಂಡಿದೆ. ಗುಂಡಿನಿಂದ ಹಾರಿದ ಪೀಸ್ ಒಂದು ತಾಗಿದ ಪರಿಣಾಮ ಸಾಯಿಯವರ ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ. ಸಾಯಿರವರು ಈಗ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಉನ್ನತ ಪೊಲೀಸ್ ಅಧಿಕಾರಿಗಳ ಸಹಿತ ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
06/06/2022 10:44 am