ಉಪ್ಪಿನಂಗಡಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್‌ಡಿಪಿಐ ಪಕ್ಷದ ಮುಸ್ತಫಾ ಎಂಬವರು ದೂರು ನೀಡಿದ್ದು, ಈ ಇಬ್ಬರು ನಾಯಕರು
ಕಳೆದ ಜನವರಿ 31 ರಂದು ಬಿಜೆಪಿ ಪಕ್ಷದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಕೋಮುಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತನ್ನ ಕಾರ್ಯಕರ್ತರಲ್ಲಿ ಗೋವನ್ನು ಮುಟ್ಟುವವರ ಕೈಕಾಲು ಕಡಿಯಿರಿ, ನಾಲಗೆ ಸೀಳಿರಿ ಎನ್ನುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಸ್ಥಳೀಯ ಶಾಸಕ ಹರೀಶ್ ಪೂಂಜ ಒಂದು ನಿರ್ದಿಷ್ಟ ಸಮುದಾವನ್ನು ಅವಹೇಳನ ಮಾಡಿದ್ದಾರೆ. ಇದರಿಂದ ಅವರ ಪಕ್ಷದ ಕಾರ್ಯಕರ್ತರು ಇದು ಪಕ್ಷದ ಅಧಿಕೃತ ಆದೇಶವೆಂಬಂತೆ ಅಲ್ಲಲ್ಲಿ ಅಮಾಯಕರ ಮೇಲೆ ಚೂರಿ ಇರಿತ, ಹಲ್ಲೆ ಪ್ರಕರಣಗಳನ್ನು ನಡೆಸುತ್ತಿದ್ದಾರೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿಕೊಂಡು ಇಂತಹ ಸಮಾಜದ ಸ್ವಾಸ್ಥ್ಯ ಕದಡುವಂತಹ ಭಾಷಣಗೈದವರನ್ನು ಕಾನೂನಿನಡಿಯಲ್ಲಿ ಬಂಧಿಸಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ.
ಅಲ್ಲದೆ, ಭಾಷಣದ ತುಣುಕುಗಳಿರುವ ಸಿಡಿ ಯನ್ನೂ ದೂರಿನ ಪ್ರತಿಯೊಂದಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭ ಝಕರಿಯಾ ಕೊಡಿಪ್ಪಾಡಿ, ಶುಕೂರು ಕುಪ್ಪೆಟ್ಟಿ, ರಶೀದ್ ಮಠ ಇದ್ದರು.
Kshetra Samachara
13/02/2021 03:47 pm