ಮಂಗಳೂರು: ‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯಿಂದ ಮಹಿಳೆಯೊಬ್ಬರು ತರಿಸಿಕೊಂಡ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿದೆ. ಈ ಬಗ್ಗೆ ಆಘಾತಕ್ಕೊಳಗಾದ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕಾರ್ಯಾಚರಿಸುತ್ತಿರುವ ‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯಿಂದ ಲೇಡಿಹಿಲ್ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬವರು ಶನಿವಾರ ಸಂಜೆ 7:30ಕ್ಕೆ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಂತ್ರಸ್ತೆ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ದಿಢೀರ್ ಹುಳು ಗೋಚರಿಸಿದೆ. ಇದರಿಂದ ಇಡೀ ಕುಟುಂಬವೇ ಆತಂಕ್ಕೀಡಾಗಿದೆ. ಈ ಬಗ್ಗೆ ಸಂತ್ರಸ್ತೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಸಂಸ್ಥೆಯವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದ್ದರೂ ವಿಫಲವಾಗಿದೆ. ಆಹಾರ ಪೂರೈಕೆ ಸಂಸ್ಥೆಯವರು ಸರಿಯಾಗಿ ನೋಡದೆ ಆಹಾರ ಪೊಟ್ಟಣ ಕಟ್ಟಿದ್ದಾರೆ ಎಂದು ಆರೋಪಿಸಿರುವ ಸಂತ್ರಸ್ತ ಮಹಿಳೆ, ಇದು ಆರೋಗ್ಯದ ವಿಚಾರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
Kshetra Samachara
31/01/2021 08:44 pm