ಮಂಗಳೂರು: ನಗರದ ನ್ಯೂಚಿತ್ರಾ ಟಾಕೀಸ್ ಬಳಿ ಪೊಲೀಸ್ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಹನ್ನೊಂದಕ್ಕೇರಿದೆ.
ಬಂಟ್ವಾಳ ತಾಲೂಕಿನ ಅರ್ಕುಳ ನಿವಾಸಿ ಇಬ್ರಾಹಿಂ ಶಾಕೀರ್ (19), ಕುದ್ರೋಳಿ ನಿವಾಸಿಗಳಾದ ಅಕ್ಬರ್ (30) ಹಾಗೂ ಮೊಹಮ್ಮದ್ ಹನೀಫ್ (32) ಬಂಧಿತರು.
ನಗರದ ಬಂದರ್ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಅವರು ನಗರದ ನ್ಯೂಚಿತ್ರಾ ಟಾಕೀಸ್ ಬಳಿ ಡಿಸೆಂಬರ್ 16ರಂದು ಕರ್ತವ್ಯದಲ್ಲಿದ್ದ ಸಂದರ್ಭ ಬೈಕ್ ನಲ್ಲಿ ಬಂದ ಆರೋಪಿಗಳು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದರು.
ಈ ಹಿಂದೆ ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕ ಸಹಿತ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಆರೋಪದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಲು ಸಂಚು ಹೂಡಿದ್ದರು ಎಂದು ತನಿಖೆಯ ಸಂದರ್ಭ ಆರೋಪಿಗಳು ತಿಳಿಸಿದ್ದರು.
Kshetra Samachara
28/01/2021 11:11 pm